ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು-2025: ಜೋಶುವಾ ಚೆಪ್ಟೆಗೆಯ್, ಸಾರಾ ಚೆಲಂಗಾಟ್ಗೆ ಪ್ರಶಸ್ತಿ
Picture by World 10k Bengaluru 2025
ಬೆಂಗಳೂರು: ಉಗಾಂಡದ ಜೋಶುವಾ ಚೆಪ್ಟೆಗೆಯ್ ಹಾಗೂ ಸಾರಾ ಚೆಲಂಗಾಟ್ ರವಿವಾರ ನಡೆದ ವಿಶ್ವ ಅತ್ಲೆಟಿಕ್ಸ್ ಗೋಲ್ಡ್ ಲೇಬಲ್ ರೋಡ್ ರೇಸ್ ಟಿಸಿಎಸ್ ವರ್ಲ್ಡ್ ಕೆ ಬೆಂಗಳೂರು-2025ರಲ್ಲಿ ಕ್ರಮವಾಗಿ ಅಂತರ್ರಾಷ್ಟ್ರೀಯ ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡರು.
ಕಾಕತಾಳೀಯವಾಗಿ ಚೆಪ್ಟೆಗೆಯ್ ಹಾಗೂ ಸಾರಾ ತಲಾ 26,000 ಯುಎಸ್ ಡಾಲರ್ ಬಹುಮಾನದೊಂದಿಗೆ ಟಿಸಿಎಸ್ ವರ್ಲ್ಡ್ 10 ಕೆ ಪ್ರಶಸ್ತಿಗಳನ್ನು ಗೆದ್ದಿರುವ ಉಗಾಂಡದ ಮೊದಲ ಕ್ರೀಡಾಪಟುಗಳಾಗಿದ್ದಾರೆ.
10,000 ಮೀ. ಓಟದ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಚೆಪ್ಟೆಗೆಯ್ 27.53 ಸೆಕೆಂಡ್ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಏರಿಟ್ರಿಯಾದ ಸೇಮನ್ ಟೆಸ್ಫಾಗಿಯೋರ್ಗಿಸ್(27.55 ಸೆಕೆಂಡ್)ಹಾಗೂ ಕೀನ್ಯದ ವಿನ್ಸೆಂಟ್ ಲಾಂಗಟ್(28.02 ಸೆ.)ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದರು.
ಚೆಪ್ಟೆಗೆಯ್ 2014ರಲ್ಲಿ ಬೆಳ್ಳಿ ಪದಕ ಜಯಿಸಿದ್ದು ಈ ಬಾರಿ ಮೊದಲ ಸ್ಥಾನ ಪಡೆದಿದ್ದಾರೆ. ತ್ವರಿತ ಆರಂಭದ ಹೊರತಾಗಿಯೂ ನಿಕೋಲಸ್ ಕಿಮೆಲಿ(27.38 ಸೆ.)ನಿರ್ಮಿಸಿರುವ ಪುರುಷರ ದಾಖಲೆಯು ಹಾಗೆಯೇ ಉಳಿದಿದೆ.
“ನಾನು 2014ರಲ್ಲಿ ಬಂದಾಗ, ಅದು ನನ್ನ ಮೊದಲ ಅಂತರ್ರಾಷ್ಟ್ರೀಯ ಓಟವಾಗಿದ್ದರಿಂದ ನನಗೆ ಯಾವುದೇ ಅನುಭವವಿರಲಿಲ್ಲ. ಈ ವರ್ಷ ಬೆಂಗಳೂರಿಗೆ ಹಿಂತಿರುಗಿ ಪ್ರಶಸ್ತಿ ಗೆದ್ದಿದ್ದಕ್ಕೆ ತುಂಬಾ ಖುಷಿಯಾಗಿದೆ. ಕಳೆದ ವರ್ಷ ನಾನು ದಿಲ್ಲಿ ಮ್ಯಾರಥಾನ್ ಗೆದ್ದಿದ್ದೆ. ಭಾರತವು ಕನಸುಗಳನ್ನು ಬೆನ್ನಟ್ಟಲು ಒಂದು ಸ್ಥಳ ಎಂದು ನಂಬುತ್ತೇನೆ” ಎಂದು ಚೆಪ್ಟೆಗೆಯ್ ಹೇಳಿದ್ದಾರೆ.
ಮಹಿಳೆಯರ ಓಟದಲ್ಲಿ ಸಾರಾ 31.07 ಸೆಕೆಂಡ್ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಸಾರಾ ಉಗಾಂಡದ ನ್ಯಾಶನಲ್ 10,000 ಮೀ. ದಾಖಲೆ ಹೊಂದಿದ್ದಾರೆ. ಸಿಂಟಿಯಾ ಚೆಪ್ಂಗೆನೊ(ಕೀನ್ಯ) ಹಾಗೂ ಗೆಟೆನಿ ಶಾಂಕೊ(ಇಥಿಯೋಪಿಯಾ)ಕ್ರಮವಾಗಿ 32.04 ಸೆಕೆಂಡ್ ಹಾಗೂ 32.06 ಸೆಕೆಂಡ್ನಲ್ಲಿ ಗುರಿ ತಲುಪಿ 2ನೇ ಹಾಗೂ 3ನೇ ಸ್ಥಾನ ಪಡೆದಿದ್ದಾರೆ.
► ಭಾರತೀಯರ ಪೈಕಿ ಅಭಿಷೇಕ್ ಹಾಗೂ ಸಂಜೀವನಿಗೆ ಅಗ್ರ ಸ್ಥಾನ
ಅಭಿಷೇಕ್ ಪಾಲ್ಗೆ(29.12 ಸೆಕೆಂಡ್) ರವಿವಾರ ಸ್ಮರಣೀಯ ದಿನವಾಗಿದ್ದು, ಭಾರತೀಯ ಪುರುಷರ ವಿಭಾಗದ ಮ್ಯಾರಥಾನ್ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಕಿರಣ್ ಮ್ಹಾತ್ರೆ(29.32 ಸೆ.)ನಿರ್ಮಿಸಿದ್ದ ಭಾರತೀಯ ದಾಖಲೆಯನ್ನು ಮುರಿದಿದ್ದಾರೆ. 2023ರ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನ 10,000 ಮೀ. ಓಟದಲ್ಲಿ ಕಂಚಿನ ಪದಕ ವಿಜೇತ ಪಾಲ್ ಒಟ್ಟಾರೆ 7ನೇ ಸ್ಥಾನ ಪಡೆದು ನಾಲ್ವರು ಅಂತರ್ರಾಷ್ಟ್ರೀಯ ಅತ್ಲೀಟ್ಗಳನ್ನು ಹಿಂದಿಕ್ಕಿದರು.
ಸವನ್ ಬಾರ್ವಲ್(29.45 ಸೆ.)ಹಾಗೂ ಕಿರಣ್ ಮ್ಹಾತ್ರೆ(30.01 ಸೆ.)ಅನುಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದಿದ್ದಾರೆ.
ಸಂಜೀವನಿ ಜಾಧವ್ ಸತತ 4ನೇ ಬಾರಿ ಭಾರತೀಯ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಸಂಜೀವನಿ 34.16 ಸೆಕೆಂಡ್ನಲ್ಲಿ ಗುರಿ ತಲುಪಿದರು. ಆದರೆ 2018ರಲ್ಲಿ ನಿರ್ಮಿಸಿರುವ ತನ್ನದೇ ದಾಖಲೆ(33.38 ಸೆ.)ಮುರಿಯಲು ಸಾಧ್ಯವಾಗಲಿಲ್ಲ.
ಭಾರತಿ ನೈನ್(35.36 ಸೆ.)ಹಾಗೂ ಪೂನಂ ಸೋನುನೆ(35.57 ಸೆ.)ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದಿದ್ದಾರೆ.
ಸಂಜೀವನಿ ಇತ್ತೀಚೆಗೆ ನಡೆದಿರುವ ಫೆಡರೇಶನ್ ಕಪ್ನಲ್ಲಿ 5,000 ಮೀ. ಹಾಗೂ 10,000 ಮೀ. ಓಟದಲ್ಲಿ ಚಿನ್ನ ಪದಕ ಜಯಿಸಿದ್ದರು.
ಅಭಿಷೇಕ್ ಹಾಗೂ ಸಂಜೀವನಿ ಕ್ರಮವಾಗಿ 3,00,000 ರೂ. ಬಹುಮಾನ ಗೆದ್ದಿದ್ದಾರೆ. ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಕ್ಕೆ ಅಭಿಷೇಕ್ ಹೆಚ್ಚುವರಿ 1 ಲಕ್ಷ ರೂ. ಬಹುಮಾನಕ್ಕೆ ಭಾಜನರಾದರು.