ಸೌದಿಯ ವೆಲ್ತ್ ಫಂಡ್ ಜೊತೆ ಭಾಗೀದಾರಿಕೆ ಒಪ್ಪಂದ ಮಾಡಿಕೊಂಡ ಡಬ್ಲ್ಯುಟಿಎ
ಹೊಸದಿಲ್ಲಿ: ಸೌದಿ ಅರೇಬಿಯದ ಸೋವೆರಿನ್ ವೆಲ್ತ್ ಫಂಡ್ ಪಿಐಎಫ್ ಜೊತೆಗೆ ಬಹುವರ್ಷಗಳ ಭಾಗೀದಾರಿಕೆ ಒಪ್ಪಂದ ಮಾಡಿಕೊಂಡಿರುವುದಾಗಿ ವಿಮೆನ್ಸ್ ಟೆನಿಸ್ ಟೂರ್ (ಡಬ್ಲ್ಯುಟಿಎ) ಸೋಮವಾರ ಘೋಷಿಸಿದೆ. ಇದೇ ಸಂಸ್ಥೆಯ ಜೊತೆಗೆ ಪುರುಷರ ಟೆನಿಸ್ ಟೂರ್ (ಎಟಿಪಿ) ಕೂಡ ಫೆಬ್ರವರಿಯಲ್ಲಿ ಒಪ್ಪಂದ ಮಾಡಿಕೊಂಡಿತ್ತು.
ಮಹಿಳೆಯರ ವೃತ್ತಿಪರ ಟೆನಿಸನ್ನು ಬೆಳೆಸಲು ಮತ್ತು ಜಗತ್ತಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಬಾಲಕಿಯರು ಈ ಕ್ರೀಡೆಯತ್ತ ಆಕರ್ಷಿತವಾಗುವಂತೆ ನೋಡಿಕೊಳ್ಳಲು ಪಿಐಎಫ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಡಬ್ಲ್ಯುಟಿಎ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇತ್ತೀಚೆಗೆ, ಅಗ್ರ 8 ಸಿಂಗಲ್ಸ್ ಆಟಗಾರರು ಮತ್ತು ಡಬಲ್ಸ್ ಜೋಡಿಗಳು ಪಾಲ್ಗೊಳ್ಳುವ ಋತುವಿನ ಕೊನೆಯ ಡಬ್ಲ್ಯುಟಿಎ ಫೈನಲ್ಸ್ ಈ ವರ್ಷದಿಂದ ಆರಂಭಿಸಿ ಮುಂದಿನ ಮೂರು ವರ್ಷಗಳ ಕಾಲ ರಿಯಾದ್ನಲ್ಲಿ ನಡೆಯುತ್ತದೆ ಎಂಬುದಾಗಿ ಘೋಷಿಸಲಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ಎರಡು ಸಂಸ್ಥೆಗಳ ನಡುವೆ ಮೇಲಿನ ಒಪ್ಪಂದ ಏರ್ಪಟ್ಟಿದೆ.
“ಋತುವಿನಾದ್ಯಂತ ನಮ್ಮ ಪ್ರತಿಭಾವಂತ ಆಟಗಾರರು ಎಲ್ಲೆಡೆ ಪ್ರವಾಸ ಮಾಡುವುದನ್ನು ನಾವು ಎದುರು ನೋಡುತ್ತಿದ್ದೇವೆ. ಟೆನಿಸ್ ಬೆಳೆಯುತ್ತಿರುವಂತೆಯೇ ಕ್ರೀಡೆಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಳ್ಳುತ್ತಾರೆ. ಇದರಿಂದ ಪ್ರೇರಣೆಗೊಂಡು ಹೆಚ್ಚಿನ ಯುವಜನರು ಟೆನಿಸ್ ಆಡಲು ಮುಂದೆ ಬರುತ್ತಾರೆ’’ ಎಂದು ಡಬ್ಲ್ಯುಟಿಎ ವೆಂಚರ್ಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮರೀನಾ ಸ್ಟೋರ್ಟಿ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಪಿಐಎಫ್ ಮೊದಲ ಬಾರಿಗೆ ಡಬ್ಲ್ಯುಟಿಎ ರ್ಯಾಂಕಿಂಗ್ಸ್ ನ ಘೋಷಣಾ ಭಾಗೀದಾರ ಆಗಿದೆ.
ಕ್ರೀಡಾ ಸೂಪರ್ ಪವರ್ ಆಗುವತ್ತ ಸೌದಿ ಅರೇಬಿಯದ ಹೆಜ್ಜೆಗಳು
ಕ್ರೀಡಾ ಸೂಪರ್ ಪವರ್ ಆಗುವ ನಿಟ್ಟಿನಲ್ಲಿ ಸೌದಿ ಅರೇಬಿಯವು ಇತ್ತೀಚಿನ ವರ್ಷಗಳಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಕಳೆದ ವರ್ಷ ಅದು ‘ನೆಕ್ಸ್ಟ್ ಜನ್ ಫೈನಲ್ಸ್’ ಎಂಬ ಮೊದಲ ಎಟಿಪಿ ಟೂರ್ ಪಂದ್ಯಾವಳಿಯನ್ನು ಏರ್ಪಡಿಸಿತ್ತು.
ಅದು ನೊವಾಕ್ ಜೊಕೊವಿಕ್ ಮತ್ತು ಕಾರ್ಲೋಸ್ ಅಲ್ಕಾರಝ್ ನಡುವೆ ಹಾಗೂ ಮಹಿಳೆಯರ ವಿಭಾಗದಲ್ಲಿ ಅರೈನಾ ಸಬಲೆಂಕ ಮತ್ತು ಉನಸ್ ಜಾಬಿರ್ ನಡುವೆ ಪ್ರದರ್ಶನ ಪಂದ್ಯಗಳನ್ನು ಆಯೋಜಿಸಿದೆ.
ಜನವರಿಯಲ್ಲಿ, ಸೌದಿ ಅರೇಬಿಯವು ರಫೇಲ್ ನಡಾಲ್ರನ್ನು ಸೌದಿ ಟೆನಿಸ್ ಫೆಡರೇಶನ್ನ ರಾಯಭಾರಿಯಾಗಿ ನೇಮಿಸಿತ್ತು.
ಸೌದಿ ಅರೇಬಿಯವು ಫಾರ್ಮುಲಾ ವನ್ ಮತ್ತು ಮೋಟೊಜಿಪಿ ಗ್ರ್ಯಾನ್ ಪ್ರಿ ಕಾರು ರೇಸ್ ಏರ್ಪಡಿಸುತ್ತಿದೆ. ಅದೂ ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಅದು ತನ್ನ ರಾಷ್ಟ್ರೀಯ ಫುಟ್ಬಾಲ್ ಲೀಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಜಾಗತಿಕ ಮಟ್ಟದ ಫುಟ್ಬಾಲ್ ಆಟಗಾರರನ್ನು ನೇಮಿಸುತ್ತಿದೆ. ಅದು ಆಕರ್ಷಕ ಬಾಕ್ಸಿಂಗ್ ಸ್ಪರ್ಧೆಗಳನ್ನೂ ಏರ್ಪಡಿಸುತ್ತಿದೆ.