ಪಹಲ್ಗಾಮ್‌ ದಾಳಿ | ರಕ್ತ ಸೋರುತ್ತಿದ್ದರೂ ಸಂತ್ರಸ್ತರನ್ನು ಹೊತ್ತುಕೊಂಡು ಬಂದು ರಕ್ಷಿಸಿದ್ದು ಮುಸ್ಲಿಮರೇ : ಸಂತೋಷ್‌ ಲಾಡ್

Update: 2025-04-26 11:15 IST
ಪಹಲ್ಗಾಮ್‌ ದಾಳಿ | ರಕ್ತ ಸೋರುತ್ತಿದ್ದರೂ ಸಂತ್ರಸ್ತರನ್ನು ಹೊತ್ತುಕೊಂಡು ಬಂದು ರಕ್ಷಿಸಿದ್ದು ಮುಸ್ಲಿಮರೇ : ಸಂತೋಷ್‌ ಲಾಡ್
  • whatsapp icon

 ಬೆಂಗಳೂರು: ಕಳೆದ 11 ವರ್ಷಗಳಿಂದಲೂ ಕೇಂದ್ರ ಸರ್ಕಾರ ದಿನದ 24 ಗಂಟೆಯೂ ಮುಸ್ಲಿಮರನ್ನು ಅಂತ ಬೈಯೋದು ಬಿಟ್ಟರೆ ಬೇರೇನು ಮಾಡಿಲ್ಲ ಎಂದು ಸಚಿವ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಜಿಕಲ್ ಸ್ಟ್ರೈಕ್ ಏನಾಯ್ತು? ಪುಲ್ವಾಮಾ ದಾಳಿ ಏನಾಯ್ತು? ಯಾರೂ ಚರ್ಚೆ ಮಾಡ್ತಿಲ್ಲ ಯಾಕೆ..? ಹಿಂದೂ ಪರವಾಗಿ ಬಹಳ ಮಮತೆ ಹೊಂದಿರುವ ಬಿಜೆಪಿ ಕೇಂದ್ರ ಸರ್ಕಾರವೇ ಹಿಂದೂಗಳನ್ನು ಕೊಳ್ಳೆ ಹೊಡೆದು, ಲೂಟಿ ಮಾಡಿ, ಕೊಂದಿರೋದು. 2014ರಿಂದ ಆಗಿರುವ ಹಿಂದೂಗಳ ಹತ್ಯೆಯ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕು ಎಂದರು.

20 ರಾಜ್ಯಗಳಲ್ಲಿ ನಿಮ್ಮ ಪಕ್ಷದವರೇ ಸಿಎಂ, ನೀವೆ ಪಿಎಂ, ಬರೀ ಹಿಂದೂ ಮುಸ್ಲಿಂ ಬಿಟ್ಟರೆ ಬೇರೆ ಏನೂ ಇಲ್ಲ. ಸರ್ಕಾರವೇ ತಮ್ಮ ವೈಫಲ್ಯ ಅಂತ ಹೇಳಿದೆ. ಆರ್ಟಿಕಲ್ 370 ರದ್ದು ಮಾಡಿದ್ದು ಇವರೇ. ಎಲ್ಲಾ ನಮ್ಮ ಕಂಟ್ರೋಲ್ ನಲ್ಲೇ ಇದೆ ಅಂದ್ರು. ನಾನು ನೋಡಿದಂತೆ ಅಲ್ಲಿನ ಲೋಕಲ್ ಜನ ನಮಗಿಂತ ಹೆಚ್ಚಾಗಿ ಅಲ್ಲಿನ ಜನ ರಕ್ತ ಕಣ್ಣೀರು ಹಾಕ್ತಿದ್ದಾರೆ. ಅಲ್ಲಿ ಹೇಗೆ ಬಂದೂಕು ಬಂತು, ಅವರು ಹೇಗೆ ಬಂದ್ರು ಅದರ ಬಗ್ಗೆ ಚರ್ಚೆ ಮಾಡ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಾನು ಅಲ್ಲೇ ಇದ್ದೆ. ರಕ್ತಸಿಕ್ತಗೊಂಡ ಪ್ರತಿಯೊಬ್ಬರನ್ನು ಹೆಗಲಮೇಲೆ ಹೊತ್ತುಕೊಂಡು ಆರೇಳು ಕಿಲೋ ಮೀಟರ್ ಕೆಳಗೆ ಬಂದಿದ್ದಾರೆ. ಅದರ ಬಗ್ಗೆ ಒಂದಾದರೂ ಒಳ್ಳೆಯದು ಮಾತಾಡಬಾರದಾ? ಎರಡು ಸಾವಿರದಷ್ಟು ಜನರನ್ನು ಸ್ಥಳಾಂತರಿಸಿದ್ದು ಹೆಚ್ಚಿನವರೂ ಅಲ್ಲಿನ ಮುಸ್ಲಿಮರೇ. ಅದರ ಬಗ್ಗೆ ಯಾವುದೇ ಚರ್ಚೆ ಬೇಡ್ವಾ? ಈ ದೇಶದಲ್ಲಿ ಬಹುತೇಕ ಭಯೋತ್ಪಾದಕ ಚಟುವಟಿಕೆಗಳು ನಡೆದಿರುವಂಥದ್ದು ಪಾಕಿಸ್ತಾನದ ಭಾಗದಿಂದಲೇ. ಆದರೆ ಈಗ ಯಾಕೆ ಜಾತಿ ಎತ್ತಿ ಮಾತನಾಡುತ್ತೀರಿ. ಪುಲ್ವಾಮಾದಲ್ಲಿ ದಾಳಿ ಮಾಡಿದವರು ಯಾವ ಜನಾಂಗದವರು? ಬಲಿಯಾದವರು ಯಾವ ಜನಾಂಗದವರು? ಎಂದು ಪ್ರಶ್ನಿಸಿದರು.

ಆಗಿರುವ ಘಟನೆ ಸಮರ್ಥಿಸಿಕೊಳ್ಳುವಂತಹ ವಿಚಾರವೇ ಅಲ್ಲ. ರಾಜಕೀಯ, ಧಾರ್ಮಿಕವಾಗಿ ಎಲ್ಲರೂ ಈ ಘಟನೆಯನ್ನು ಖಂಡಿಸಿದ್ದಾರೆ. ಬಿಜೆಪಿಯವರಿಗೆ ತಮ್ಮ ಬೇಳೆ ಬೇಯಬೇಕು. ಚುನಾವಣೆ ಗೆಲ್ಲಬೇಕು. ಬಿಹಾರ ಚುನಾವಣೆ ಪ್ರಚಾರದಲ್ಲಿ ಕೇವಲ ಪಾಕಿಸ್ತಾನವನ್ನು ಮುಗಿಸಿ ಬಿಡುತ್ತೇನೆ ಎಂದು ಹೇಳಿದ್ದೇ ವಿನಃ ಬಿಹಾರದಲ್ಲಿ ಏನು ಮಾಡಿದ್ದಾರೆ ಎಂಬುವುದನ್ನು ಹೇಳುತ್ತಿಲ್ಲ. ಅಲ್ಲಿನ ತೀರಾ ಹಿಂದುಳಿದ ಜಿಲ್ಲೆಯ ವಾರ್ಷಿಕ ತಲಾ ಆದಾಯ ಅಂದಾಜು 42000 ರೂ. ಇರಬಹುದು. ಆದರೆ ಚುನಾವಣೆ ಮುಗಿಯುವ ವರೆಗೂ ಇದ್ಯಾವುದರ ಬಗ್ಗೆಯೂ ಮಾತನಾಡದೇ ಕೇವಲ ಪಾಕಿಸ್ತಾನ, ಮುಸಲ್ಮಾನ, ಅಫಘಾನಿಸ್ತಾನ, ತಾಳಿ, ಮಂಗಳ ಸೂತ್ರದ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶ್ರೀನಗರದಲ್ಲಿ ಹೆಜ್ಜೆ ಹೆಜ್ಜೆಗೂ ಚೆಕ್ಪೋಸ್ಟ್ ಇದೆ. ಒಂದು ಹುಳನೂ ತಪ್ಪಿಸಿಕೊಂಡು ಹೋಗೋಕೆ ಆಗಲ್ಲ. ಗೃಹ ಸಚಿವರನ್ನ ಕೇಳುತ್ತಿದ್ದೇನೆ, ದಾಳಿ ನಡೆದಾಗ ಯಾಕೆ ಒಬ್ಬ ಸೆಕ್ಯೂರಿಟಿ ಕೂಡಾ ಇಲ್ಲ.? ಇದರ ಬಗ್ಗೆ ಚರ್ಚೆ ಆಗಬೇಕೇ ವಿನಃ ಬೇರೆಯದ್ದಕ್ಕಲ್ಲ. ಮಾತಿಗೆ ಮುನ್ನ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹಿಂದೂ-ಮುಸ್ಲಿಂ ಅಂತಾರೆ. ಹಾಗಾದ್ರೆ ನಿಮ್ಮ ಅವಧಿಯಲ್ಲಿ ಹಿಂದೂಗಳಿಗೆ ಅನ್ಯಾಯ ಆಯ್ತು ಅಂತ ಒಪ್ಪಿಕೊಳ್ಳಿ. ಇಂತಹ ದೊಡ್ಡ ಘಟನೆ ನಡೆದರೂ ಪ್ರಧಾನಿ ಮೋದಿ ಬಿಹಾರ ಚುನಾವಣೆ ಪ್ರಚಾರದಲ್ಲಿ ಭಾಗವಹಿಸ್ತಾರೆ ಅಂತ ಕೇಂದ್ರದ ವಿರುದ್ಧ ಹರಿಹಾಯ್ದರು.

ಕಳೆದ 11 ವರ್ಷಗಳಲ್ಲಿ ಎಷ್ಟು ಭಯೋತ್ಪಾದಕ ಕೃತ್ಯಗಳು ನಡೆದಿವೆಯೋ, ಎಷ್ಟು ಜನ ಜೀವ ಕಳೆದುಕೊಂಡಿದ್ದಾರೋ ಅದರೆ ಬಗ್ಗೆ ಕೇಂದ್ರ ಸರ್ಕಾರ ಬಹಿರಂಗ ಚರ್ಚೆ ನಡೆಸಬೇಕು. ತಮ್ಮ ಆಡಳಿತ ಅವಧಿಯಲ್ಲಿ ಮೋದಿಯವರು ದೇಶಕ್ಕೆ ನೀಡಿದ ಕೊಡುಗೆ ಏನೂ ಇಲ್ಲ. ಆದ್ದರಿಂದ ಮೋದಿ ಅವರು ರಾಜಿನಾಮೆ ಕೊಟ್ಟು, ಬೇರೆಯವರಿಗೆ ಅವಕಾಶ ಮಾಡಿಕೊಡಲಿ̤ ಎಂದು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News