ಬಾಪೂಜಿ ಸೇವಾ ಕೇಂದ್ರದ ಮೂಲಕ ಗೃಹಜ್ಯೋತಿಗೆ 1 ಲಕ್ಷ ನೋಂದಾವಣೆ; ಗೃಹಲಕ್ಷ್ಮಿ ಯೊಜನೆಗೂ ಅವಕಾಶ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಜು.19 : ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ‘ಗೃಹಜ್ಯೋತಿʼ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯದ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಲಭ್ಯವಿರುವ ಬಾಪೂಜಿ ಸೇವಾ ಕೇಂದ್ರದ ಮೂಲಕ ಒಂದು ಲಕ್ಷ ವಿದ್ಯುತ್ ಬಳಕೆದಾರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರ ಇದೀಗ ಜಾರಿಗೆ ತಂದಿರುವ ‘ಗೃಹಲಕ್ಷ್ಮಿ’ ಯೊಜನೆಗೂ ಬಾಪುಜಿ ಸೇವಾ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಭಾಗಗಳ ನಿವಾಸಿಗಳ ಸೌಲಭ್ಯಕ್ಕಾಗಿ ಜಾರಿಗೆ ತಂದಿರುವ ಬಾಪೂಜಿ ಸೇವಾ ಕೇಂದ್ರದಲ್ಲಿ ಅಗತ್ಯವಿರುವ ಎಲ್ಲ ಸೇವೆಗಳು ಹಾಗೂ ಮಾಹಿತಿ ಒಂದೇ ಸ್ಥಳದಲ್ಲಿ ಲಭ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.
'ಬಾಪೂಜಿ ಸೇವಾ ಕೇಂದ್ರದ ಮೂಲಕ ಗ್ರಾಮೀಣ ಭಾಗದ ಜನರು ಆಸ್ತಿ ತೆರಿಗೆ ಪಾವತಿ ಮಾಡಬಹುದಾಗಿದ್ದು, ಕಟ್ಟಡ ನಿರ್ಮಾಣ ಲೈಸೆನ್ಸ್ ಪಡೆಯಲು ಅರ್ಜಿ ಸಲ್ಲಿಸಬಹುದು. ಮನೆ ನಿರ್ಮಾಣದ ನಂತರ ಆಕ್ಯುಪೆನ್ಸಿ ಸರ್ಟಿಫಿಕೆಟ್ ಪಡೆಯಲೂ ಈ ಕೆಂದ್ರ ನೆರವಿಗೆ ಬರುವುದು. ವ್ಯಾಪಾರ ಸಂಬಂಧಿತ ಲೈಸೆನ್ಸ್ ಪಡೆಯಲೂ ಬಾಪೂಜಿ ಸೇವಾಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು' ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.