ಮಾಡಿರುವ ಕೆಲಸಕ್ಕೆ ನಮ್ಮ ಜನರಿಗೆ ಈವರೆಗೂ ಕೂಲಿ ಸಿಕ್ಕಿಲ್ಲ: ಮನರೇಗಾ ಬಾಕಿ ಕುರಿತು ಕೇಂದ್ರದ ವಿರುದ್ಧ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

Update: 2023-12-12 09:04 GMT

ಬೆಂಗಳೂರು: ಕೇಂದ್ರ ಸರಕಾರದಿಂದ ರಾಜ್ಯದ ಕೃಷಿ ಕೂಲಿ ಕಾರ್ಮಿಕರಿಗೆ  ಮನರೇಗಾ ಹಣ ಪಾವತಿ ಬಾಕಿ ಇರುವ ಕುರಿತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯ ಬಿಜೆಪಿ ಹಾಗೂ ಕೇಂದ್ರ ಹಣಕಾಸು ಸಚಿವರು ಕರ್ನಾಟಕ ಸರ್ಕಾರಕ್ಕೆ ಯಾವುದೇ ಪಾವತಿ ಹಣ ಬಾಕಿ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ, ಡಿಸೆಂಬರ್ 11, 2023ರಂತೆ ಕೇಂದ್ರ ಸರ್ಕಾರ ಮನರೇಗಾ ಅಡಿಯಲ್ಲಿ ನಮಗೆ ₹468 ಕೋಟಿ ವೇತನ ಬಾಕಿ ನೀಡಬೇಕಿದೆ. ಮಾಡಿರುವ ಕೆಲಸಕ್ಕೆ ನಮ್ಮ ಜನರಿಗೆ ಈವರೆಗೂ ಕೂಲಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ರಾಜ್ಯದಲ್ಲಿ ಬರ ಪರಿಹಾರ ಸಂಬಂಧ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕಾರ್ಮಿಕರ ದುಡಿಯುವ ದಿನ 100 ರಿಂದ 150 ಕ್ಕೆ ಹೆಚ್ಚಿಸಬೇಕೆಂದು ಮುಖ್ಯ ಮಂತ್ರಿಗಳು ಸಹಿತ ಸಚಿವರು ಕೇಂದ್ರ ಸರಕಾರದ ಬಳಿ ಮನವಿ ಮಾಡಿಕೊಂಡಿದ್ದರು.

ಡಿ.8 ರಂದು ಬೆಳಗಾವಿ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಡಿ.ಕೆ ಶಿವಕುಮಾರ್ ನರೇಗಾ ಕಾರ್ಮಿಕರ ದುಡಿಯುವ ದಿನ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿದ್ದರು, “ ರಾಜ್ಯದಲ್ಲಿ ಬರಗಾಲ ಬಂದಿದೆ. ವಿರೋಧ ಪಕ್ಷದ ನಾಯಕರು ಕೂಡ ಬರ ಅಧ್ಯಯನಕ್ಕಾಗಿ ಓಡಾಡಿದ್ದಾರೆ. ಅವರು ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಕೊಡಿಸಲಿ. ಬರಗಾಲ ಹಿನ್ನೆಲೆಯಲ್ಲಿ ನರೇಗಾ ಯೋಜನೆಯಲ್ಲಿ ಕಾನೂನಿನ ಪ್ರಕಾರ ಪ್ರತಿ ವ್ಯಕ್ತಿಗೆ ಇರುವ 100 ಕೆಲಸದ ದಿನಗಳನ್ನು 150 ದಿನಗಳಿಗೆ ವಿಸ್ತರಣೆ ಮಾಡಬಹುದು. ಇದನ್ನು ಕೇಂದ್ರ ಸರ್ಕಾರದಿಂದ ಘೋಷಣೆ ಮಾಡಿಸುತ್ತಿಲ್ಲ ಯಾಕೆ? ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಕೊಡಿಸುತ್ತಿಲ್ಲ ಯಾಕೆ?" ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News