ರೈತರಿಗೆ 7 ಗಂಟೆ ಮೂರು ಫೇಸ್ ವಿದ್ಯುತ್ ಪೂರೈಕೆ: ಸಚಿವ ಪ್ರಿಯಾಂಕ್ ಖರ್ಗೆ

Update: 2023-12-04 17:38 GMT

ಬೆಳಗಾವಿ: ಬರಗಾಲದ ಸಂಕಷ್ಟದ ನಡುವೆಯೂ ರೈತರಿಗೆ 7 ಗಂಟೆ ಮೂರು ಫೇಸ್ ವಿದ್ಯುತ್ ಪೂರೈಕೆ ಮಾಡಲು ಮುಂಜಾಗ್ರತಾ ಕ್ರಮಗಳನ್ನು ಸರಕಾರ ತೆಗೆದುಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸೋಮವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಪರವಾಗಿ ಉತ್ತರಿಸಿದ ಅವರು, ರೈತರ ಕೃಷಿ ಪಂಪ್ ಸೆಟ್‍ಗಳಿಗೆ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ. ಅಲ್ಲದೆ, ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಆದರೂ ಸರಕಾರ ರೈತರಿಗೆ ತೊಂದರೆಯಾಗದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

ಒಂದೂವರೆ ತಿಂಗಳು ಸ್ವಲ್ಪ ಮಟ್ಟಿಗೆ ತೊಂದರೆಯಾಗಿದ್ದು ನಿಜ. ಈಗ ಪರಿಸ್ಥಿತಿ ಸುಧಾರಿಸಿದೆ ಎಂದ ಅವರು, ವಿವಿಧ ಭಾಗಗಳಲ್ಲಿ ಹೆಚ್ಚು ಪೂರೈಕೆ ಮಾಡಬೇಕೆಂಬ ಬೇಡಿಕೆಯಿದೆ. ಭತ್ತ ಮತ್ತು ಕಬ್ಬು ಬೆಳೆಯುತ್ತಿರುವ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚಿದೆ. ಹೀಗಾಗಿ ಕೆಲವು ಪ್ರದೇಶಗಳಲ್ಲಿ ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ಹಗಲಿನಲ್ಲಿ ನಾಲ್ಕು ಗಂಟೆ, ರಾತ್ರಿ 3 ಗಂಟೆ ಸೇರಿದಂತೆ ಒಟ್ಟು 7 ಗಂಟೆ ಕಾಲ ವಿದ್ಯುತ್ ಪೂರೈಸುತ್ತಿದ್ದೇವೆ ಎಂದು ಹೇಳಿದರು.

ಸಚಿವರ ಉತ್ತರಕ್ಕೆ ತೃಪ್ತರಾಗದ ಬಿಜೆಪಿ ಸದಸ್ಯರು, ಸುಳ್ಳು ಹೇಳುವುದಕ್ಕೂ ಮಿತಿ ಇರಬೇಕು. ಗ್ರಾಮೀಣ ಭಾಗಗಳಲ್ಲಿ ಸಕಾಲಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೆ ರೈತರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಸರಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ, ಕೋಟಾ ಶ್ರೀನಿವಾಸ್ ಪೂಜಾರಿ, ವೈ. ನಾರಾಯಣಸ್ವಾಮಿ ಮತ್ತಿತರರು ವಾಗ್ದಾಳಿ ನಡೆಸಿದರು.

ಇದಕ್ಕೆ ತಿರುಗೇಟು ಕೊಟ್ಟ ಕಾಂಗ್ರೆಸ್ ಸದಸ್ಯರು, ನಿಮ್ಮ ಕಾಲದಲ್ಲಿ ಎಷ್ಟು ವಿದ್ಯುತ್ ಉತ್ಪಾದನೆ ಮಾಡಿದ್ದೀರಿ. ಒಂದೇ ಒಂದು ಯೂನಿಟ್ ಉತ್ಪಾದನೆ ಮಾಡದೆ ನಿಮ್ಮಿಂದ ನಾವೇನು ಪಡೆಯುವುದಿದೆ ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಉಂಟಾಯಿತು. ಆಗ ಸಭಾಪತಿಯವರು ತಮ್ಮ ಪೀಠದಿಂದ ಎದ್ದು ನಿಂತು ಸದಸ್ಯರನ್ನು ಹೊರತುಪಡಿಸಿ ಯಾರೂ ಮಾತನಾಡಬಾರದು. ನಾನು ಈ ವಿಷಯದ ಬಗ್ಗೆ ಚರ್ಚಿಸಲು ಅರ್ಧ ಗಂಟೆ ಸಮಯ ಕೊಡುವುದಾಗಿ ಹೇಳಿದಾಗ ಚರ್ಚೆಗೆ ತೆರೆ ಬಿದ್ದಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News