3 ಲಕ್ಷ ಬಂಡವಾಳದಲ್ಲಿ ಬೆಳೆದ ಟೊಮೆಟೊ ಬೆಳೆಯಿಂದ 30 ಲಕ್ಷ ಆದಾಯ ಗಳಿಸಿದ ಚಿಕ್ಕಮಗಳೂರಿನ ರೈತ

Update: 2023-08-06 14:56 GMT

ಚಿಕ್ಕಮಗಳೂರು, ಆ.6: ಟೊಮೆಟೊ ಇಳುವರಿ ಕುಂಠಿತಗೊಂಡಿರುವುದರಿಂದ ದೇಶಾದ್ಯಂತ ಟೊಮೆಟೊ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತಿದೆ. ಜಿಲ್ಲೆಯ ರೈತರೊಬ್ಬರು ಮೂರು ಲಕ್ಷ ಬಂಡವಾಳ ಹೂಡಿ ಟೊಮೆಟೊ ಬೆಳೆದು 30 ಲಕ್ಷ ರೂ. ಆದಾಯಗಳಿಸಿದ್ದಾರೆ.

ಕಡೂರು ತಾಲೂಕಿನ ಅಂತರಘಟ್ಟೆ ಕುಮಾರಪ್ಪ ಅವರು ಬೆಳೆದ ಟೊಮೆಟೊಗೆ ಉತ್ತಮ ಬೆಲೆ ಸಿಕ್ಕಿದ್ದು, 3 ಲಕ್ಷ ರೂ. ಬಂಡವಾಳ ಹಾಕಿ ಟೊಮೆಟೊ ಬೆಳೆದಿದ್ದ ಅವರಿಗೆ 30 ಲಕ್ಷ ರೂ. ಲಾಭಗಳಿಸಿದ್ದಾರೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಭತ್ತ, ಕಾಫಿ, ಅಡಿಕೆ, ಕಾಳುಮೆಣಸು ಬೆಳೆಯಲಾಗುತ್ತಿದ್ದರೇ, ಬಯಲುಸೀಮೆ ಭಾಗವಾದ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ಭಾಗದಲ್ಲಿ ದ್ವಿದಳ ಧಾನ್ಯಗಳ ಜೊತೆಗೆ ಟೊಮೆಟೊ ಬೆಳೆಯಲಾಗುತ್ತದೆ. ಪ್ರತೀ ವರ್ಷ ಟೊಮೆಟೊ ಬೆಳೆದು ರೈತರು ಕೈ ಸುಟ್ಟುಕೊಳ್ಳುತ್ತಿದ್ದರು. ಆದರೆ, ಈ ವರ್ಷ ಟೊಮೆಟೊಗೆ ಭಾರೀ ಬೆಲೆ ಬಂದಿದ್ದು, ಬೆಲೆ ಇದ್ದರೂ ಬೆಳೆ ಇಲ್ಲದಂತಾಗಿದೆ. ದಿನದಿಂದ ದಿನಕ್ಕೆ ಟೊಮೆಟೊ ಬೆಲೆ ಏರಿಕೆಯಾಗುತ್ತಿದ್ದು, ಟೊಮೆಟೊ ಬೆಳೆಯುತ್ತಿರುವ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ.

ಚಿಕ್ಕಮಗಳೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತೀ ಕೆಜಿ ಟೊಮೆಟೊ 160ರಿಂದ 180ಕ್ಕೆ ಮಾರಾಟವಾಗುತ್ತಿದೆ. ಹಾಗಾಗಿ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಟೊಮೆಟೊವನ್ನು ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹರಾಜಿಗೆ ತರಲಾಗುತಿದೆ. ಕೆಲ ದಿನಗಳಿಂದ 15 ಸಾವಿರ ಬಾಕ್ಸ್ ಟೊಮೆಟೊ ಮಾರುಕಟ್ಟೆಗೆ ಬಂದಿದ್ದು, 25ಕೆ.ಜಿ. ಬಾಕ್ಸ್‍ಗೆ 2500ರಿಂದ 4600ರೂ. ಗೆ ಮಾರಾಟವಾಗುತ್ತಿದೆ.

ದಿನದಿಂದ ದಿನಕ್ಕೆ ದರ ಏರಿಕೆಯಾಗುತ್ತಿದ್ದು, ಬೆಲೆ ಕಡಿಮೆಯಾಗಲು ಕನಿಷ್ಠ 1 ತಿಂಗಳು ಬೇಕಾಗುತ್ತದೆ. ಮಹಾರಾಷ್ಟ್ರ ಸೇರಿದಂತೆ ಇತರೆಡೆ ಬೆಳೆಯುವ ಟೊಮೆಟೊ ಮಾರುಕಟ್ಟೆಗೆ ಬಂದರೆ ದರ ಕಡಿಮೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳೆದ ಟೊಮೆಟೊ ಹೊರ ರಾಜ್ಯಗಳಾದ ದಿಲ್ಲಿ, ರಾಜಸ್ತಾನ್, ಗುಜರಾತ್, ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದೆ.

ದಿನದಿಂದ ದಿನಕ್ಕೆ ದರ ಏರಿಕೆಯಾಗುತ್ತಿದ್ದು, ಬೆಲೆ ಕಡಿಮೆಯಾಗಲು ಕನಿಷ್ಠ 1 ತಿಂಗಳು ಬೇಕಾಗುತ್ತದೆ. ಮಹಾರಾಷ್ಟ್ರ ಸೇರಿದಂತೆ ಇತರೆಡೆ ಇರುವ ಟೊಮೆಟೊ ಮಾರುಕಟ್ಟೆಗೆ ಬಂದರೆ ದರ ಕಡಿಮೆಯಾಗುವ ಸಾಧ್ಯತೆಗಳಿವೆ. ಚಿಕ್ಕಮಗಳೂರಿನಲ್ಲಿ ಬೆಳೆಯುತ್ತಿರುವ ಟೊಮೆಟೊ ಹೊರ ರಾಜ್ಯಗಳಿಗೆ ಪೂರೈಕೆಯಾಗುತ್ತಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಟೊಮಾಟೊ ಬೆಲೆ ದುಪ್ಪಟ್ಟಾಗುತ್ತಿದೆ. ಉತ್ತಮ ಬೆಲೆ ಕಾರಣಕ್ಕೆ ಟೊಮೆಟೊ  ಬೆಳೆದವರಿಗೆ ಉತ್ತಮ ಲಾಭ ಸಿಗುತ್ತಿದೆ.

- ಹರೀಶ್, ಟೊಮೆಟೊ ವ್ಯಾಪಾರಿ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News