ಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದು: ಹೈಕೋರ್ಟ್

Update: 2024-11-09 08:31 GMT

ಬೆಂಗಳೂರು : ಅಪರಾಧದಲ್ಲಿ ಭಾಗಿಯಾಗಿರುವ ಪತಿಯೊಂದಿಗೆ ನೆಲೆಸಿರುವುದಕ್ಕಾಗಿ ಪತ್ನಿಯನ್ನು ಸಹ ಆರೋಪಿಯನ್ನಾಗಿ ಮಾಡಲಾಗುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಅಬಕಾರಿ ಕಾಯ್ದೆಯಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಪತಿ ನಾರ್ಬರ್ಟ್ ಡಿಸೋಜಾ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಶಾಂತಿ ರೋಚ್‌ನನ್ನು ಸಹ ಆರೋಪಿಯನ್ನಾಗಿ ಸೇರಿಸಲು ಕೋರಿ ಪ್ರಕರಣದ ದೂರುದಾರ ಆರ್‌.ಕೆ.ಭಟ್ ಎಂಬುಬರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ‌ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ,‌ ಪ್ರಕರಣದ ಆರೋಪಿಯಾದ ನಾರ್ಬರ್ಟ್ ಡಿಸೋಜಾ ಜತೆ ಪತ್ನಿ ಶಾಂತಿ ರೋಚ್ ಒಂದೇ ಮನೆಯಲ್ಲಿ ನೆಲೆಸಿದ್ದರು. ಪತ್ನಿಯೂ ಪತಿಯ ಅಕ್ರಮ ಮದ್ಯ ತಯಾರಿಕೆ ಹಾಗೂ ಮಾರಾಟದಲ್ಲಿ ಸಾಥ್ ನೀಡಿದ್ದಳು. ಆಕೆಯೂ ಆ ಬಗ್ಗೆ ಸ್ವಲ್ಪ ಪ್ರಮಾಣದ ಜ್ಞಾನವನ್ನು ಹೊಂದಿದ್ದಳು. ಹೀಗಾಗಿ ಪ್ರಕರಣದಲ್ಲಿ ಆಕೆಯನ್ನು ಸಹ ಆರೋಪಿಯೆಂದು ಪರಿಗಣಿಸಿ ವಿಚಾರಣೆಗೊಳಪಡಿಸುವಂತೆ ಮನವಿ ಮಾಡಿದರು.

ಸರಕಾರದ ಪರ‌ ವಕೀಲರು ಪ್ರತಿ ವಾದ ಮಂಡಿಸಿ, ಪತಿಯ ಈ ವಹಿವಾಟು ನಿಸ್ಸಂದೇಹವಾಗಿ ಪತ್ನಿಯೂ ಬಲ್ಲವಳಾಗಿರುತ್ತಾಳೆ. ಈ ನಿಟ್ಟಿನಲ್ಲಿ ಆಕೆಯನ್ನು ಸಹ ಆರೋಪಿ ಎಂದು ಪರಿಗಣನೆ ಮಾಡಬಹುದು ಎಂದರು.

ವಾದ -ಪ್ರತಿವಾದ ಆಲಿಸಿದ ನ್ಯಾಯಾಲಯ ಪ್ರಕರಣದ ಸೂಕ್ತ ಸಾಕ್ಷಾಧಾರಗಳು ಲಭ್ಯವಿರದ ಹೊರತಾಗಿ ಅಪರಾಧದಲ್ಲಿ ಭಾಗಿಯಾಗಿರುವ ಪತಿಯೊಂದಿಗೆ ನೆಲೆಸಿರುವುದ್ದಕ್ಕಾಗಿ ಪತ್ನಿಯನ್ನು ಸಹ ಆರೋಪಿಯನ್ನಾಗಿ ಮಾಡಲಾಗುವುದಿಲ್ಲ. ಅಲ್ಲದೆ, ಸಿಆರ್‌ಪಿಸಿ ಸೆಕ್ಷನ್ 319 ರ ಅಡಿಯಲ್ಲಿ ವಿಚಾರಣೆಯ ಪೂರ್ವ ಹಂತದಲ್ಲಿ ಪ್ರಕರಣ ಕುರಿತಾಗಿ ಇನ್ನೋರ್ವ ಆರೋಪಿಯನ್ನು ಕರೆತಲಾಗುವುದಿಲ್ಲ. ಚಾರ್ಜ್ ಶೀಟ್ ಸಲ್ಲಿಕೆ ನಂತರ ಸೂಕ್ತ ಪುರಾವೆ ಲಭ್ಯವಾದಲ್ಲಿ ಮಾತ್ರ ಸಮನ್ಸ್ ಜಾರಿಗೊಳಿಸಬಹುದಾಗಿದೆ. ಹೀಗಾಗಿ ಸುಖಾಸುಮ್ಮನೆ ಪತ್ನಿಯನ್ನು ಅಪರಾಧ ಜಾಲದೊಳಗೆ ಸಿಲುಕಿಸಲಾಗದು. ಈ ವಿಚಾರ ಸರಿಯಾಗಿ ಅರ್ಥೈಸಿಕೊಳ್ಳದೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಹೀಗಾಗಿ ಪ್ರಕರಣದಲ್ಲಿ ನ್ಯಾಯಪೀಠ ಮಧ್ಯ ಪ್ರವೇಶಿಸಲು ನಿರಾಕರಿಸಿ ಆದೇಶಿಸಿದೆ.

ಈ ವಿಚಾರವಾಗಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಬಂಟ್ವಾಳ ಜೆ ಎಂಎಫ್ ಸಿ ನ್ಯಾಯಾಲಯ ಹೊರಡಿಸಿದ ಆದೇಶ ಪ್ರಶ್ನಿಸಿ ತುಮಕೂರಿನ ಕುವೆಂಪು ನಗರ ನಿವಾಸಿ ಅರ್ಜಿ ಆರ್.ಕೆ ಭಟ್ ಸಲ್ಲಿಸಿದ್ದರು. ಅದರೆ ಅಧೀನ ನ್ಯಾಯಾಲಯ ಮನವಿಯನ್ನು ತಿರಸ್ಕರಿಸಿತ್ತು. ಹೀಗಾಗಿ ‌ದೂರುದಾರ ಹೈಕೋರ್ಟ್ ಮೊರೆಹೋಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News