ಕೆಪಿಎಸ್ಸಿ ಮೂಲಕ 750 ಭೂ ಮಾಪಕರ ನೇಮಕಾತಿಗೆ ಕ್ರಮ : ಸಚಿವ ಕೃಷ್ಣಬೈರೇಗೌಡ
ಬೆಂಗಳೂರು : ರಾಜ್ಯ ಸರಕಾರವು 35 ಭೂ ದಾಖಲೆಗಳ ಸಹಾಯಕ ನಿರ್ದೇಶಕರು (ಎಡಿಎಲ್‍ಆರ್) ಹಾಗೂ 750 ಭೂ ಮಾಪಕರನ್ನು ರಾಜ್ಯ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಂಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರಾದ ಬಾಬಾಸಾಹೇಬ್ ಪಾಟೀಲ್ ಹಾಗೂ ಐಹೊಳೆ ದುಯೋರ್ಧನ ಕೇಳಿದ ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ʼಸರ್ವೇ ಇಲಾಖೆಯಲ್ಲಿನ ಸಮಸ್ಯೆಗಳಿಂದಾಗಿ ರೈತರು ಸಂಕಷ್ಟಕ್ಕೀಡಾಗಿರುವುದು ನಮ್ಮ ಗಮನದಲ್ಲಿದೆ. ಅಲ್ಲದೆ, ಈ ಸಮಸ್ಯೆಯನ್ನು ಬಗೆಹರಿಸಲು ಸರಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆʼ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಜನ ಸ್ಪಂದನಾ ಕಾರ್ಯಕ್ರಮದಲ್ಲೂ ಸರ್ವೇ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬರುತ್ತಿವೆ. ಆದುದರಿಂದ, ಸರ್ವೇಯರ್ ಇಲಾಖೆಯಲ್ಲಿ ಖಾಲಿಯಿರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲು ನಮಗೆ ಸೂಚನೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
35 ಎಡಿಎಲ್‍ಆರ್ ಭರ್ತಿಗೆ ಕ್ರಮ ಕೈಗೊಂಡಿದ್ದೇವೆ. 750 ಭೂ ಮಾಪಕರ ಭರ್ತಿಗೆ ನೋಟಿಫಿಕೇಷನ್ ಹೊರಡಿಸಿದ್ದು, ಕೆಪಿಎಸ್ಸಿ ಮುಖಾಂತರ ಸಂದರ್ಶನ ಇಲ್ಲದೆ ನೇರ ನೇಮಕಾತಿ ಮಾಡುತ್ತಿದ್ದೇವೆ. 750 ಹುದ್ದೆಗಳಿಗೆ 77,241 ಅರ್ಜಿಗಳು ಬಂದಿವೆ. 4-6 ತಿಂಗಳ ಒಳಗಡೆ ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಒತ್ತಾಯ ಮಾಡಲಾಗುವುದು ಎಂದು ಅವರು ಹೇಳಿದರು.
ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ ಹೊಸ ಹುದ್ದೆಗಳನ್ನು ಮಂಜೂರು ಮಾಡುವ ಸಂಬಂಧ ಹಣಕಾಸು ಇಲಾಖೆ ಜೊತೆ ಚರ್ಚೆ ಮಾಡುತ್ತಿದ್ದೇವೆ. ಈಗಾಗಲೆ 1193 ಪರವಾನಗಿ ಹೊಂದಿರುವ ಖಾಸಗಿ ಸರ್ವೇಯರ್ ಗಳನ್ನು ನೇಮಕ ಮಾಡಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ನಮ್ಮ ಸಿಬ್ಬಂದಿಗಳ ಕೆಲಸದ ವೇಗ ಹೆಚ್ಚಾಗಲು ಮೂರು ಪಟ್ಟು ಸರ್ವೇ ಕೆಲದ ವೇಗ ಪಡೆಯಲು ಆಧುನಿಕ ಉಪಕರಣವಾದ ರೋವರ್ ಬಳಸಿ ಸರ್ವೇ ನಡೆಸಲೂ ಸೂಚಿಸಲಾಗಿದೆ. ಈ ಮೂಲಕ ರೈತರ ಸಮಸ್ಯೆಗಳನ್ನು ಬಗೆಹರಿಸುವ ಹಾಗೂ ಸರ್ವೇ ಇಲಾಖೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಸರಕಾರ ಬದ್ಧವಾಗಿದೆ ಅವರು ಹೇಳಿದರು.
ಈ ವೇಳೆ ಮದ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಅರಗ ಜ್ಞಾನೇಂದ್ರ, ಮಲೆನಾಡಿನ ರೈತರ ಸಮಸ್ಯೆ ಬೆಂಗಳೂರಿನಿಂದ ತೇರ್ಗಡೆಯಾಗಿ ಹೋದ ಸರ್ವೇಯರ್ ಗೆ ಗೊತ್ತಾಗೋದೆ ಇಲ್ಲ. ಇಷ್ಟಕ್ಕೂ ಅವರು ಬೆಂಗಳೂರಿನಿಂದ ಹೊರಟು ಮಲೆನಾಡಿಗೆ ಬಂದು ತಲುಪುವುದರ ಒಳಗಾಗಿ ಡೆಪ್ಯುಟೇಷನ್ ಮೇಲೆ ಮತ್ತೆ ಬೆಂಗಳೂರಿಗೆ ಹಿಂತಿರುಗುತ್ತಾರೆ ಎಂದು ಆರೋಪಿಸಿದರು.
ಈ ಆರೋಪಕ್ಕೆ ಉತ್ತರಿಸಿದ ಕೃಷ್ಣ ಬೈರೇಗೌಡ, ಕಳೆದ ಒಂದು ವರ್ಷದಲ್ಲಿ ನಾನು ವೈಯಕ್ತಿಕವಾಗಿ ಒಂದೇ ಒಂದು ಪ್ರಕರಣದಲ್ಲೂ ಡೆಪ್ಯುಟೇಶನ್ ಮಾಡಿಲ್ಲ. ಅಲ್ಲದೇ, ಡೆಪ್ಯುಟೇಶನ್ ಮೇಲೆ ಬೇರೆ ಕಡೆ ಹೋಗಿರುವ ಅಧಿಕಾರಿಗಳನ್ನೂ ಹಿಂದಕ್ಕೆ ಕರೆಸಲಾಗಿದೆ ಎಂದು ಮಾಹಿತಿ ನೀಡಿದರು.