ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ: ಸಚಿವ ಎಂ.ಸಿ. ಸುಧಾಕರ್
ಬೆಂಗಳೂರು : ಕಾಲೇಜು ಶಿಕ್ಷಣ ಇಲಾಖೆಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳಲ್ಲಿ ಖಾಲಿ ಇದ್ದ ಒಟ್ಟು 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಭರ್ತಿ ಮಾಡಲು ಕ್ರಮ ವಹಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ..ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ಸೋಮವಾರ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಚಿದಾನಂದ್ ಎಂ.ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪರೀಕ್ಷಾ ಪ್ರಾಧಿಕಾರವು, ಸರಕಾರದ ನೇಮಕಾತಿ ಹಾಗೂ ಮೀಸಲಾತಿ ನಿಯಮಗಳನ್ವಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಪ್ರಕಟಿಸಿತ್ತು. ಆ ಬಳಿಕ ಹಲವು ಪ್ರಕ್ರಿಯೆಗಳ ಬಳಿಕ 2023ರ ಫೆಬ್ರವರಿ 1ರ ಸುತ್ತೋಲೆಯ ಹಿನ್ನೆಲೆಯಲ್ಲಿ ಪರೀಕ್ಷಾ ಪ್ರಾಧಿಕಾರವು ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು 2023ರ ಫೆ.17ರಂದು ಪ್ರಕಟಿಸಿತು. ಕೆಲ ಅಭ್ಯರ್ಥಿಗಳಿಂದ ಕರ್ನಾಟಕ ನ್ಯಾಯಮಂಡಳಿಯಲ್ಲಿ ದಾವೆ ಹೂಡಲಾಗಿದೆ. ಅಲ್ಲದೆ, ಇದೇ ಸಂಬಂಧ ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ನೀಡಿದ್ದು, ಈ ತೆಡೆಯಾಜ್ಞೆಯನ್ನು ಕೂಡಲೇ ತೆರವುಗೊಳಿಸಲು ಕ್ರಮವಹಿಸಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದು, ಆ ಬಳಿಕ ನೇಮಕಾತಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.