ಎಲ್ಲಾ ಸಮುದಾಯಕ್ಕೂ ಡಿಸಿಎಂ ಹುದ್ದೆ ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕು : ಡಿ.ಕೆ.ಸುರೇಶ್

Update: 2024-06-24 13:03 GMT

‌ಬೆಂಗಳೂರು : ರಾಜ್ಯದಲ್ಲಿ ಮೂರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕೆಂಬ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು, "ಎಲ್ಲಾ ಸಮುದಾಯಕ್ಕೂ ಡಿಸಿಎಂ ಹುದ್ದೆ ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕು. ಆ ಮೂಲಕ ಪಕ್ಷ ಬಲವರ್ಧನೆ ಮಾಡಬೇಕು. ಈ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಬೇಕು" ಎಂದು  ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು," ಪಕ್ಷ ತೀರ್ಮಾನ ಮಾಡಿ ಇನ್ನು ಐವರನ್ನು ಡಿಸಿಎಂ ಮಾಡಿದರೆ ಒಳ್ಳೆಯದು. ಎಂಟು ಬಾರಿ ಶಾಸಕರಾಗಿರುವ ರಾಮಲಿಂಗಾ ರೆಡ್ಡಿ, ಎಂಟು ವರ್ಷಗಳ ಕಾಲ ಪಕ್ಷದ ಅಧ್ಯಕ್ಷರಾಗಿದ್ದ ಪರಮೇಶ್ವರ್, ಪಕ್ಷದ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿರುವ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಎಂ.ಬಿ ಪಾಟೀಲ್, ಒಕ್ಕಲಿಗ ಸಮುದಾಯದಲ್ಲಿ ಕೃಷ್ಣ ಭೈರೇಗೌಡ, ಮಂಡ್ಯದಿಂದ ಚೆಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ಆರ್.ವಿ ದೇಶಪಾಂಡೆ, ಕೆ.ಎಚ್ ಮುನಿಯಪ್ಪ ಇದ್ದಾರೆ. ಹೀಗೆ ಎಲ್ಲಾ ಸಮುದಾಯಕ್ಕೂ ಡಿಸಿಎಂ ಹುದ್ದೆ ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕು" ಎಂದು ಹೇಳಿದರು.

ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ:

ಸೂರಜ್ ರೇವಣ್ಣ ಅವರ ಪ್ರಕರಣದ ಬಗ್ಗೆ ಕೇಳಿದಾಗ, "ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿಚಾರ. ಅವರ ಬಗ್ಗೆ ನಾವು ಮಾತನಾಡಿದರೆ ತಪ್ಪಾಗುತ್ತದೆ. ಹೀಗಾಗಿ ನೀವು ಮಾತನಾಡಬೇಡಿ. ರಾಜ್ಯದ ಜನ ಗಮನಿಸುತ್ತಿದ್ದು, ಕಾನೂನು ಕ್ರಮ ಕೈಗೊಳ್ಳಲಿದೆ" ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News