ಗುತ್ತಿಗೆದಾರ ಸಂಘದ ಉಪಾಧ್ಯಕ್ಷನ ಸಂಬಂಧಿಯ ನಿವಾಸಕ್ಕೆ ಐಟಿ ದಾಳಿ; 23 ಬಾಕ್‌ಗಳಲ್ಲಿ 42 ಕೋಟಿ ರೂ. ಪತ್ತೆ
ಬೆಂಗಳೂರು, ಅ.13: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್.ಅಂಬಿಕಾಪತಿ ಅವರ ಸಂಬಂಧಿ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದು, 42 ಕೋಟಿ ರೂಪಾಯಿಗೂ ಅಧಿಕ ಮೊತ್ತದ ನಗದು ಪತ್ತೆಯಾಗಿದೆ. ಈ ಸಂಬಂಧ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಇಲ್ಲಿನ ಆರ್‍ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆತ್ಮನಾಂದ ಲೇಔಟ್‍ನಲ್ಲಿರುವ ಆರ್. ಅಂಬಿಕಾಪತಿ ಸಂಬಂಧಿ ಪ್ರದೀಪ್ ಎಂಬುವರ ನಿವಾಸದಲ್ಲಿ 23 ಕರ್ಟನ್ ಬಾಕ್ಸ್‍ಗಳಲ್ಲಿ 500 ರೂ. ಮುಖಬೆಲೆಯ ಒಟ್ಟು 42 ಕೋಟಿ ರೂ.ಹಣ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಸುಲ್ತಾನ್ ಪಾಳ್ಯ, ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ವಿವಿಧೆಡೆ ಆರ್.ಅಂಬಿಕಾಪತಿ ಸೇರಿದ ನಿವಾಸ, ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು.
ಅಂಬಿಕಾಪತಿ ಹಾಗೂ ಬಿಬಿಎಂಪಿ ಮಾಜಿ ಸದಸ್ಯೆ ಅಶ್ವಥಮ್ಮ ಅವರ ಮನೆ ಮೇಲೆ ಗುರುವಾರ ರಾತ್ರಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಪ್ರದೀಪ್‍ಗೆ ಸೇರಿದ ನಿವಾಸದಲ್ಲಿ ಶುಕ್ರವಾರ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯಕ್ಕೆ ಪತ್ತೆಯಾಗಿರುವ ಕೋಟ್ಯಂತರ ರೂ.ಹಣ ಯಾರಿಗೆ ಸೇರಿದ್ದು, ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ವಸತಿ ಗೃಹ ಯಾರ ಒಡೆತನಕ್ಕೆ ಸೇರಿದೆ, ಹಣದ ಮೂಲ ಯಾವುದು, ಎಲ್ಲಿಗೆ ಸಂಗ್ರಹಿಸಲಾಗುತಿತ್ತು ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಮೂಲಗಳ ಪ್ರಕಾರ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ಇಷ್ಟು ದೊಡ್ಡ ಮೊತ್ತದ ಹಣವನ್ನು ಕಾರಿನ ಮೂಲಕ ಚೆನ್ನೈನಿಂದ ತೆಲಂಗಾಣ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ಸಿದ್ದತೆ ನಡೆಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಸಂಬಂಧ ಐಟಿ ಅಧಿಕಾರಿಗಳು ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಹಾಗೂ ಮಾಜಿ ಬಿಬಿಎಂಪಿ ಸದಸ್ಯೆ ಅಶ್ವಥಮ್ಮ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಅದೇ ರೀತಿ, ಬ್ಯಾಂಕ್ ಖಾತೆಗಳು, ಚಿರ-ಚರಾಸ್ತಿಗಳು ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಐಟಿ ದಾಳಿ ನಡೆಸಿದ ವೇಳೆ ಸ್ಥಳೀಯ ಪೆÇಲೀಸರ ನೆರವು ಪಡೆಯಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಮಿಷನ್ ಆರೋಪ ಮಾಡಿದ್ದ: ಈ ಹಿಂದಿನ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಆರ್.ಅಂಬಿಕಾಪತಿ ಅವರು ಶೇ.40 ಪಸೆರ್ಂಟ್ ಕಮಿಷನ್ ಆರೋಪ ಮಾಡಿದ್ದರು. ರಾಜ್ಯದಲ್ಲಿ ನಡೆಯುವ ಕಾಮಗಾರಿಗೆ ಶೇ.40, ಬಿಬಿಎಂಪಿಯಲ್ಲಿ ಶೇ.50ರಷ್ಟು ಕಮಿಷನ್ ನೀಡಬೇಕು ಎಂದು ಹೇಳಿ ಕೆಲವು ರಾಜಕೀಯ ನಾಯಕರ ಮೇಲೆ ಗಂಭೀರ ಆರೋಪ ಮಾಡಿದ್ದರು.
ಇನ್ನೂ, ತನ್ನ ವಿರುದ್ಧ ಕಮಿಷನ್ ಆರೋಪ ಮಾಡಿದ ಬಿಜೆಪಿ ಶಾಸಕ ಮುನಿರತ್ನ ಅವರು ಆರ್. ಅಂಬಿಕಾಪತಿ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೂಡಿದ್ದರು. ಈ ಪ್ರಕರಣದಲ್ಲಿ ಆರ್.ಅಂಬಿಕಾಪತಿ ವೈಯಾಲಿಕಾವಲ್ ಠಾಣೆ ಪೆÇಲೀಸರಿಂದ ಬಂಧನಕ್ಕೊಳಗಾಗಿ ಬಳಿಕ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಅಷ್ಟೇ ಅಲ್ಲದೆ, ಆರ್.ಅಂಬಿಕಾಪತಿಯ ಪತ್ನಿ ಅಶ್ವತಮ್ಮ ಅವರು ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿ ಎಂದೂ ಹೇಳಲಾಗುತ್ತಿದೆ.
10ಕ್ಕೂ ಹೆಚ್ಚು ಕಡೆ ಐಟಿ ದಾಳಿ: ತೆರಿಗೆ ವಂಚನೆ ಸಂಬಂಧ ಅ.12ರಂದು ನಗರದ 10ಕ್ಕೂ ಹೆಚ್ಚು ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಮಲ್ಲೇಶ್ವರಂ, ಸದಾಶಿವನಗರ, ಡಾಲರ್ಸ್ ಕಾಲನಿ, ಮತ್ತಿಕೆರೆ, ಸರ್ಜಾಪುರ ರಸ್ತೆ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಚಿನ್ನದ ವ್ಯಾಪಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಕಾಫಿ ಬೋರ್ಡ್ ನಿರ್ದೇಶಕ ಚಂದ್ರಶೇಖರ್ ಅವರ ಆರ್‍ಎಂವಿ ಎಕ್ಸ್‍ಟೆನ್ಷನ್‍ನಲ್ಲಿರುವ ನಿವಾಸದ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದರು.
ಪ್ರದೀಪ್ ವಶಕ್ಕೆ..!
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುತ್ತಿಗೆದಾರ ಅಂಬಿಕಾಪತಿ ಸಂಬಂಧಿ ಪ್ರದೀಪ್‍ನನ್ನು ಐಟಿ ಅಧಿಕಾರಿಗಳ ತಂಡ ವಶಕ್ಕೆ ಪಡೆದು ಸನ್ನಿಧಿ ಅಪಾರ್ಟ್‍ಮೆಂಟ್‍ನಲ್ಲಿರುವ ಫ್ಲ್ಯಾಟ್‍ನಿಂದ ಬೆಂಗಳೂರಿನ ಐಟಿ ಕಚೇರಿಗೆ ಸಂಜೆ ಕರೆದೊಯ್ದು ವಿಚಾರಣೆಗೊಳಪಡಿಸಿದ್ದಾರೆ.
ನಗರದಲ್ಲಿ ಗುತ್ತಿಗೆದಾರರು, ಜ್ಯುವೆಲ್ಲರಿ ಶಾಪ್ ಮಾಲಕರು ಹಾಗೂ ಮಾಜಿ ಕಾರ್ಪೊರೇಟರ್ ಗಳ ಮನೆಗಳ ಮೇಲೆ ಐಟಿ ದಾಳಿ ನಡೆದಿದ್ದು, ಈ ವೇಳೆ ಬಿಬಿಎಂಪಿ ಮಾಜಿ ಸದಸ್ಯೆ ಅಶ್ವತ್ಥಮ್ಮ ಮತ್ತು ಪತಿ ಅಂಬಿಕಾಪತಿ ಸಂಬಂಧಿ ಪ್ರದೀಪ್ ಮನೆಯಲ್ಲಿ 42 ಕೋಟಿ ರೂಪಾಯಿ ಪತ್ತೆಯಾಗಿರುವ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ವಿಪಕ್ಷ ನಾಯಕರು ರಾಜ್ಯ ಸರಕಾರದ ಕೈವಾಡ ಇರುವ ಕುರಿತು ಆಪಾದನೆ ಮಾಡಿದ್ದಾರೆ.