ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಸೇವಾವಧಿ ವಿಸ್ತರಣೆ

ಅಲೋಕ್ ಮೋಹನ್
ಬೆಂಗಳೂರು: ರಾಜ್ಯ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ) ಅಲೋಕ್ ಮೋಹನ್ ಅವರ ಸೇವಾವಧಿಯನ್ನು ಮೇ 21ರವರೆಗೆ ವಿಸ್ತರಣೆ ಮಾಡಿ ಮಂಗಳವಾರ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ರಾಜ್ಯ ಪೊಲೀಸ್ ಇಲಾಖೆಗೆ ನೂತನ ಡಿಜಿಪಿ ಆಯ್ಕೆ ಕುರಿತು ಬಿಸಿ ಬಿಸಿ ಚರ್ಚೆ ನಡುವೆ ಹಾಲಿ ಡಿಜಿಪಿ ಅಲೋಕ್ ಮೋಹನ್ ಅವರ ಸೇವಾವಧಿ ವಿಸ್ತರಣೆ ಮಾಡಲಾಗಿದೆ.
ನಾಳೆ(ಎ.30) ಡಿಜಿಪಿ ಅಲೋಕ್ ಮೋಹನ್ ಅವರ ಸೇವಾವಧಿ ಅಂತ್ಯ ಆಗುತ್ತಿರುವ ಹಿನ್ನೆಲೆಯಲ್ಲಿ ಸರಕಾರವು ಪುನಃ ಮೇ 21ರ ವರೆಗೂ ಸೇವಾವಧಿ ಅನ್ನು ಮುಂದುವರೆಸಿದೆ. ಈ ಮೂಲಕ ಪೊಲೀಸ್ ಇಲಾಖೆಗೆ ನೂತನ ಸಾರಥಿ ಆಯ್ಕೆಗೆ ಕೊಂಚ ತಡೆಬಿದ್ದಿದೆ.
ಇನ್ನೊಂದೆಡೆ, ಹಾಲಿ ಡಿಜಿಪಿ ಅಲೋಕ್ ಮೋಹನ್ ತಮ್ಮ ಸೇವೆಯನ್ನು ಮೂರು ತಿಂಗಳ ಕಾಲ ವಿಸ್ತರಿಸುವಂತೆ ರಾಜ್ಯ ಸರಕಾರಕ್ಕೆ ಕೋರಿಕೆ ಸಲ್ಲಿಸಿದ್ದರು. ಅವರು ತಿಂಗಳ ಅಂತ್ಯಕ್ಕೆ ತಾವು ನಿವೃತ್ತಿಯಾಗುತ್ತಿರುವ ಕಾರಣ ಈ ಹುದ್ದೆಯಲ್ಲಿ ಎರಡು ವರ್ಷ ಪೂರೈಸಲು ಆಗುತ್ತಿಲ್ಲ. ಆದುದರಿಂದ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಪೊಲೀಸ್ ಮುಖ್ಯಸ್ಥರ ಹುದ್ದೆಗಳಿಗೆ ಎರಡು ವರ್ಷಗಳ ಅವಧಿ ನೀಡಬೇಕೆಂದು ವಿನಂತಿಸಿದ್ದಾರೆ. ಇದನ್ನು ಸರಕಾರ ಪುರಸ್ಕರಿಸಿ, ಕೇಂದ್ರದ ಯುಪಿಎಸ್‍ಸಿ ಮತ್ತು ಕೇಂದ್ರ ಗೃಹ ಇಲಾಖೆ ಅನುಮತಿಗೆ ಕಳುಹಿಸಿದೆ. ಆದರೆ ಕೇಂದ್ರದಿಂದ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.
ಇದೇ ವೇಳೆ ಸರಕಾರ ಹೊಸ ಡಿಜಿಪಿ ನೇಮಕ ಪ್ರಕ್ರಿಯೆಯನ್ನೂ ಆರಂಭಿಸಿದ್ದು, ನಿಯಮದಂತೆ ನಾಲ್ಕು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಕೇಂದ್ರಕ್ಕೆ ಸಲ್ಲಿಸಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿಯಾಗಿರುವ ಪ್ರಶಾಂತ್ ಕುಮಾರ್ ಠಾಕೂರ್, ಸಿಐಡಿ ಡಿಜಿಯಾಗಿರುವ ಡಾ.ಎಂ.ಎ.ಸಲೀಂ, ಪೊಲೀಸ್ ಗೃಹ ನಿರ್ಮಾಣ ವಿಭಾಗದ ಡಿಜಿಯಾಗಿರುವ ರಾಮಚಂದ್ರ ರಾವ್, ಸಿಐಡಿ ಸೈಬರ್ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಅವರ ಹೆಸರುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಆಯ್ಕೆ ಸಮಿತಿ ಕೇಂದ್ರಕ್ಕೆ ಶಿಫಾರಸು ಮಾಡಿದೆ.
ಇದಕ್ಕೆ ಕೇಂದ್ರ ದಿಂದ ಪ್ರತಿಕ್ರಿಯೆ ಬರಲಿದ್ದು, ಆನಂತರ ಸರಕಾರ ತನ್ನ ವಿವೇಚನಾಧಿಕಾರ ಬಳಸಿ ಮುಂದಿನ ಆಡಳಿತಕ್ಕೆ ಪೂರಕವಾದ ಹಿರಿಯ ಅಧಿಕಾರಿಯನ್ನು ಡಿಜಿಪಿಯಾಗಿ ನೇಮಕ ಮಾಡಲಿದೆ. ಹೀಗಾಗಿ ಮುಂದಿನ ತಿಂಗಳು ಸರಕಾರದ ಆಯ್ಕೆ ಅಧಿಕೃತವಾಗಿ ಪ್ರಕಟವಾಗಲಿದೆ.
ಕನ್ನಡಿಗ ಸಲೀಂ ಸಾಧ್ಯತೆ?: ಡಿಜಿಪಿ ಹುದ್ದೆಗೆ ಸಿಐಡಿ ಡಿಜಿ ಡಾ.ಎಂ.ಎ. ಸಲೀಂ, ಅಗ್ನಿಶಾಮಕ ಇಲಾಖೆಯ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಮುನ್ನೆಲೆಯಲ್ಲಿದ್ದು, ಇಬ್ಬರಲ್ಲಿ ಕನ್ನಡಿಗ ಡಾ.ಸಲೀಂ ಅವರು ಪೊಲೀಸ್ ಇಲಾಖೆಗೆ ನೂತನ ಸಾರಥಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.