ಅನಂತಕುಮಾರ್ ಹೆಗಡೆ ಹೇಳಿಕೆ ಬೇಸರ ತಂದಿದೆ: ಬಿಜೆಪಿ ಮುಖಂಡ ವಿ.ಸೋಮಣ್ಣ

Update: 2024-01-15 14:32 GMT

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ನೀಡಿರುವ ಹೇಳಿಕೆ ವೈಯಕ್ತಿಕವಾಗಿ ನನಗೆ ಸ್ವಲ್ಪ ಬೇಸರ ತರಿಸಿದೆ ಎಂದು ಬಿಜೆಪಿ ನಾಯಕ ವಿ.ಸೋಮಣ್ಣ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಏಳು ಕೋಟಿ ಜನರ ಪ್ರತಿನಿಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷೆ ಏನು?, ಹೇಗೆ ಎಂದು ನಮಗೆ ಬೇಡ. ಅವರು ಹೇಗೆ ಸಿಎಂ ಆದರು ಅನ್ನೋದೂ ನಮಗೆ ಬೇಡ. ಸಿದ್ದರಾಮಯ್ಯ ನಡವಳಿಕೆ ಹೇಗಿರಬೇಕು ಅನ್ನೋದಕ್ಕಿಂತ ನಮ್ಮ ನಡವಳಿಕೆ ವಿಭಿನ್ನವಾಗಿರಬೇಕು ಅಷ್ಟೇ ಎಂದರು.

ವರಿಷ್ಠರ ಜೊತೆಗಿನ ಮಾತುಕತೆ ಫಲಪ್ರದವಾಗಿದೆ

ಇನ್ನೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗಿನ ಮಾತುಕತೆ ಫಲಪ್ರದವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಯ ನಂತರದ ಘಟನೆಗಳಿಂದಾದ ಎಲ್ಲ ಸಮಸ್ಯೆಗಳೂ ಈಗ ಸುಖಾಂತ್ಯ ಕಂಡಿವೆ. ರಾಜ್ಯಸಭೆ ಸ್ಥಾನ ಕೇಳಿರುವುದು ನಿಜ. ಮುಂದೆ ಏನೆಲ್ಲಾ ಜವಾಬ್ದಾರಿ ಕೊಡುತ್ತಾರೋ ನೋಡಬೇಕು ಎಂದು ಅವರು ನುಡಿದರು.

ಯಾವುದಾದರೂ ಮೂರು ಲೋಕಸಭೆ ಕ್ಷೇತ್ರಗಳ ಜವಾಬ್ದಾರಿ ಕೊಡಿ, ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಭರವಸೆ ನೀಡಿದ್ದೇನೆ. ನನಗೆ 73 ವರ್ಷ, ಆರೋಗ್ಯವಾಗಿದ್ದೇನೆ. ಬೇರೆಯವರಿಗೂ ಅವಕಾಶ ಮಾಡಿಕೊಡಬೇಕು. ಈ ತಿಂಗಳ ಕೊನೆಗೆ ಅಮಿತ್ ಶಾ ರಾಜ್ಯಕ್ಕೆ ಬರಲಿದ್ದು, ಎಲ್ಲವೂ ಬಗೆಹರಿಯಲಿದೆ. ಶಾ ಅವರ ಬಳಿ ನನ್ನ ಮಗನಿಗೆ ಯಾವುದೇ ಸ್ಥಾನವನ್ನು  ಕೇಳಿಲ್ಲ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News