ಜ.29ರಿಂದ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಸಮ್ಮೇಳನ: ಸಚಿವ ಪ್ರಿಯಾಂಕ್ ಖರ್ಗೆ

Update: 2024-01-23 16:52 GMT

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜ.29 ರಿಂದ ಮೂರು ದಿನಗಳ ಕಾಲ ಗೇಮಿಂಗ್‌ ಮತ್ತು ಅನಿಮೇಷನ್ (ಜಿಎಎಫ್‌ಎಕ್ಸ್‌) ಸಮ್ಮೇಳನ ನಡೆಯಲಿದ್ದು, ಈ ಸಮ್ಮೇಳನದಲ್ಲಿ 10 ರಾಷ್ಟ್ರಗಳಿಂದ 132 ಅಂತಾರಾಷ್ಟ್ರೀಯ ಭಾಷಣಕಾರರು ಭಾಗಿಯಾಗಲಿದ್ದಾರೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಮ್ಮೇಳನ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ಜ.29ರಿಂದ 31ರವರೆಗೆ ಅನಿಮೇಷನ್‌, ವಿಷುವಲ್‌ ಎಫೆಕ್ಟ್ಸ್‌ ಮತ್ತು ಗೇಮಿಂಗ್‌ ಸಮ್ಮೇಳನ ‘ಜಿಎಎಫ್‌ಎಕ್ಸ್–2024’ ಹಮ್ಮಿಕೊಳ್ಳಲಾಗಿದೆ’ ಎಂದರು.

ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದಲ್ಲಿ 115 ಗೋಷ್ಠಿಗಳು, 22 ಅಂತಾರಾಷ್ಟ್ರೀಯ ಭಾಷಣಗಾರರ ಸಹಿತ 130 ಭಾಷಣಗಾರರು, 10 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಮತ್ತು ಭಾರತೀಯ ಸ್ಟುಡಿಯೋಗಳ ಮಳಿಗೆಗಳು ಇರಲಿವೆ. ಸಾಧಕರು, ವಿಮರ್ಶಕರು ತಮ್ಮ ಸಾಧನೆಗಳನ್ನು ಪ್ರದರ್ಶಿಸಲಿದ್ದಾರೆ. ಗುಂಪು ಚರ್ಚೆಗಳು, ಪ್ರದರ್ಶನಗಳು, ನೀತಿ ಸಂಬಂಧಿಸಿದ ಚರ್ಚೆಗಳು ಇರಲಿವೆ ಎಂದು ಅವರು ವಿವರಿಸಿದರು.

2012ರಲ್ಲಿ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ನೀತಿಯನ್ನು ಮೊದಲ ಬಾರಿ ರೂಪಿಸಿದ ರಾಜ್ಯ ಕರ್ನಾಟಕವಾಗಿದೆ. ಈ ಉದ್ಯಮದಲ್ಲಿ ವಿಶ್ವಮಟ್ಟದಲ್ಲಿ ಪ್ರಸಿದ್ಧವಾದ ಸಮ್ಮೇಳನಗಳಲ್ಲಿ ಜಿಎಎಫ್‌ಎಕ್ಸ್ ಕೂಡಾ ಒಂದಾಗಿದ್ದು, 2016ರಿಂದ ರಾಜ್ಯದಲ್ಲಿ ಈ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ ನಡೆದ ಜಿಎಎಫ್‌ಎಕ್ಸ್ ಸಮ್ಮೇಳನದಲ್ಲಿ ಪ್ರತಿದಿನ 4,500 ಜನರು ಭಾಗವಹಿಸಿದ್ದರು. ಈ ಬಾರಿ ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆಯಿದೆ. ಜೊತೆಗೆ, ಈ ಉದ್ಯಮದ ವ್ಯಾಪಾರದ ಬೆಳವಣಿಗೆಗೆ ಉತ್ತೇಜನ ಸಿಗುವ ಸಾಧ್ಯತೆಯಿದೆ ಎಂದರು.

ಅಲ್ಲದೆ, ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಕರ್ನಾಟಕ ಶೇ.20ರಷ್ಟು ಪಾಲು ಹೊಂದಿದೆ. ಅನಿಮೇಷನ್‌, ವಿಷುವಲ್‌ ಎಫೆಕ್ಟ್ಸ್‌ ಮತ್ತು ಗೇಮಿಂಗ್‌ ಸಂಬಂಧಿಸಿದ ಅನೇಕ ಸಂಸ್ಥೆಗಳು ರಾಜ್ಯದಲ್ಲಿವೆ. ಚಾರ್ಲಿ 777 ಮತ್ತು ವಿಕ್ರಾಂತ್ ರೋನಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ‌ವಿಷುಯಲ್ ಎಫೆಕ್ಟ್‌ಗಳ ಅಬ್ಬರವನ್ನು ಗಮನಿಸಬಹುದಾಗಿದೆ ಎಂದು ಸಚಿವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News