ಅನ್ವರ್ ಮಾಣಿಪ್ಪಾಡಿ ದ್ವಿಪಾತ್ರಾಭಿನಯ ಮಾಡುತ್ತಿದ್ದಾರೆಯೇ? : ಪ್ರಿಯಾಂಕ್ ಖರ್ಗೆ
ಬೆಂಗಳೂರು : ‘ವಿಜಯೇಂದ್ರ ಮೇಲಿನ ಆರೋಪ ಸುಳ್ಳು’ ಎನ್ನುತ್ತಿರುವ ಅನ್ವರ್ ಮಾಣಿಪ್ಪಾಡಿಯವರು ದ್ವಿ ಪಾತ್ರಭಿನಯ ಮಾಡುತ್ತಿದ್ದಾರೆಯೇ? ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಅವರು, ವಕ್ಫ್ ವರದಿಯನ್ನು ಮುಚ್ಚಿಹಾಕಲು ವಿಜಯೇಂದ್ರ ಕೋಟಿ ಕೋಟಿ ಆಮಿಷ ಒಡ್ಡಿದ್ದಾರೆ ಎಂದು ಪ್ರತಿ ಮಾಧ್ಯಮಗಳಲ್ಲೂ ಘಂಟಾಘೋಷವಾಗಿ ಹೇಳಿದ್ದ ಮಣಪ್ಪಾಡಿಯವರು ಈಗ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ರಕ್ಷಣೆಗಾಗಿ ಮಾತು ಬದಲಿಸಲು ಎಷ್ಟು ‘ಆಫರ್’ ಬಂದಿದೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರ ಹೆಸರನ್ನು ಬಹಿರಂಗಪಡಿಸುವ ಬದಲು ಅವರು ವಿಜಯೇಂದ್ರ ಅವರ ಹೆಸರನ್ನು ಮಾತ್ರ ಏಕೆ ಹೇಳಿದರು? ಅನ್ವರ್ ಮಾಣಿಪ್ಪಾಡಿಯವರ ವಕ್ಫ್ ವರದಿಯನ್ನು ಮುಚ್ಚಿಹಾಕುವ ಪ್ರಯತ್ನದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದೇನೆ ಎಂದಿದ್ದರು. ಆ ಪತ್ರವನ್ನು ಈಗ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಮಾಣಿಪ್ಪಾಡಿಯವರ ಮತ್ತು ಬಿಜೆಪಿ ಗೆಳೆಯರ ನೆನಪುಗಳನ್ನು ರಿಫ್ರೆಶ್ ಮಾಡಲು ದಯವಿಟ್ಟು ವೀಡಿಯೊಗಳು ಮತ್ತು ಪತ್ರಿಕಾ ಲೇಖನಗಳನ್ನು ಅತ್ಯಂತ ಗಮನ ಕೊಟ್ಟು ನೋಡಲಿ. ಬಿಜೆಪಿ ಪಕ್ಷ, ಅವರ ಮಾಜಿ ಮುಖ್ಯಮಂತ್ರಿಗಳ ಹಾಗೂ ಅವರ ಅಧ್ಯಕ್ಷರ ಮರ್ಯಾದೆ ಉಳಿಸಲು, ನಿನ್ನೆ ಇಡೀ ರಾತ್ರಿ ಮಾಣಿಪ್ಪಾಡಿಯವರ ಕೈ ಕಾಲು ಹಿಡಿದು ಗೋಳಾಡಿರಬಹುದೇ! ಸತ್ಯಕ್ಕಾಗಿ ಹಾಗೂ ಸಮುದಾಯಕ್ಕಾಗಿ ಹುತಾತ್ಮರಾಗಲು ಸಿದ್ಧನಿದ್ದೇನೆ ಎಂದಿದ್ದ ಅನ್ವರ್ ಮಾಣಿಪ್ಪಾಡಿಯವರಿಗೆ ಈಗ ಏನಾಯಿತು ಎಂದು ಪ್ರಶ್ನೆ ಮಾಡಿದ್ದಾರೆ.