ಸಂಸದ ಇ.ತುಕಾರಾಂ ಅನರ್ಹತೆಗೆ ಚುನಾವಣಾ ಆಯೋಗಕ್ಕೆ ಮನವಿ : ಬಿ.ವೈ.ವಿಜಯೇಂದ್ರ

Update: 2024-10-22 13:34 GMT

ಇ.ತುಕಾರಾಂ/ವಿಜಯೇಂದ್ರ

ಬೆಂಗಳೂರು : ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಇ.ತುಕಾರಾಂ ಕಾನೂನನ್ನು ಗಾಳಿಗೆ ತೂರಿ ಅಕ್ರಮವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಅವರನ್ನು ಅನರ್ಹಗೊಳಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಹೊಸದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ನಾನು, ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ್ದು, ಸಂಸದ ಇ.ತುಕಾರಾಂ ಅನರ್ಹತೆ ಸಂಬಂಧ ಮನವಿ ಸಲ್ಲಿಸಿದ್ದೇವೆ ಎಂದು ವಿವರಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಮುಂದಿಟ್ಟು ಬಿಜೆಪಿ ಹೋರಾಟ ನಡೆಸಿದೆ. ನಂತರ ತನಿಖೆ ಆಧಾರದಲ್ಲಿ ಕಳೆದ ತಿಂಗಳು ಈಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಣವನ್ನು ಕಾಂಗ್ರೆಸ್ ಸರಕಾರ ಲೂಟಿ ಮಾಡಿದ್ದಾಗಿ ತಿಳಿಸಿದೆ. ಈ ಸಂಬಂಧ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 187ಕೋಟಿ ರೂ.ಹಣವನ್ನು ಲೂಟಿ ಮಾಡಿದ ಕಾಂಗ್ರೆಸ್ ಸರಕಾರವು ಆ ಹಣವನ್ನು ದುರ್ಬಳಕೆ ಮಾಡಿಕೊಂಡಿತ್ತು. ಬಳ್ಳಾರಿ, ಇತರ ಲೋಕಸಭಾ ಕ್ಷೇತ್ರಕ್ಕೆ ಆ ಹಣವನ್ನು ಬಳಸಿದ್ದು ಬೆಳಕಿಗೆ ಬಂದಿದೆ ಎಂದು ಗಮನ ಸೆಳೆದರು.

ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಉಪ ಚುನಾವಣೆ ನಡೆಯುತ್ತಿದೆ. ನೀತಿ ಸಂಹಿತೆ ಜಾರಿಯಲ್ಲಿದೆ. ಇದರ ನಡುವೆಯೂ ಸರಕಾರವು ಅಕ್ರಮವಾಗಿ ಜಾಹೀರಾತುಗಳನ್ನು ನೀಡುವುದರ ಮೂಲಕ ನೀತಿ ಸಂಹಿತೆಯನ್ನು ಗಾಳಿಗೆ ತೂರುತ್ತಿದೆ. ಈ ವಿಚಾರದಲ್ಲಿ ರಾಜ್ಯ ಸರಕಾರದ ವಿರುದ್ಧ ಕ್ರಮ ಜರುಗಿಸುವಂತೆ ನಾವು ಒತ್ತಾಯಿಸಿದ್ದೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News