ಕನ್ನಡಿಗರ ವಿರುದ್ಧ ಪಿತೂರಿ ಆರೋಪ: ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಬಂಧನಕ್ಕೆ ಆಗ್ರಹ

Update: 2025-04-22 14:47 IST
ಕನ್ನಡಿಗರ ವಿರುದ್ಧ ಪಿತೂರಿ ಆರೋಪ: ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಬಂಧನಕ್ಕೆ ಆಗ್ರಹ

Photo credit: X

  • whatsapp icon

ಬೆಂಗಳೂರು: ಸೋಮವಾರ ಬೈಕ್‌ ಸವಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಸಾಮಾನ್ಯ ರಸ್ತೆ ಜಗಳವನ್ನು ಕನ್ನಡಿಗರ ವಿರುದ್ಧ ಜನಾಂಗೀಯ ಧ್ವೇಷದಂತೆ ಬಿಂಬಿಸಿದ ವಿಂಗ್ ಕಮಾಂಡರ್ ಅನ್ನು ಬಂಧಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಆಗ್ರಹಿಸಿದ್ದು, ಎಕ್ಸ್‌ನಲ್ಲಿ #ArrestWingCommander ಅಭಿಯಾನ ಟ್ರೆಂಡಿಂಗ್ ಆಗಿದೆ.

ಸೋಮವಾರ ಮುಂಜಾನೆ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಕನ್ನಡ ಮಾತನಾಡುವ ಜನರ ಗುಂಪು ನನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿ ಶಿಲಾದಿತ್ಯ ಬೋಸ್ ಆರೋಪಿಸಿದ್ದರು. ಗಾಯಗೊಂಡು ರಕ್ತ ಸುರಿಯುತ್ತಿರುವಾಗಲೇ ಬೋಸ್ ವಿಡಿಯೋ ಮಾಡಿದ್ದು, ಆ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.

ಅಧಿಕಾರಿ ತಮ್ಮ ಪತ್ನಿಯೊಂದಿಗೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು. ಸ್ಕ್ವಾಡ್ರನ್ ಲೀಡರ್, ಪತ್ನಿ ಮಧುಮಿತಾ ದತ್ತಾ ಅವರು ನೀಡಿದ ದೂರಿನ ಆಧಾರದ ಮೇಲೆ, ಅಪರಿಚಿತ ವ್ಯಕ್ತಿಗಳ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿತ್ತು.

ಈ ವಿಡಿಯೋ ಇಟ್ಟುಕೊಂಡು ರಾಷ್ಟ್ರೀಯ ಮಾಧ್ಯಮಗಳು ಏಕಪಕ್ಷೀಯವಾಗಿ ವರದಿಗಳನ್ನು ಮಾಡಿದ್ದವು. ಕನ್ನಡ ಮಾತನಾಡದಕ್ಕೆ ಹಲ್ಲೆ ಮಾಡಲಾಗಿದೆ ಎಂಬರ್ಥದಲ್ಲಿ ಘಟನೆಯನ್ನು ತಿರುಚಲಾಗಿತ್ತು. ಇದೀಗ, ಸಿಸಿಟಿವಿ ವಿಡಿಯೋದಲ್ಲಿ ವಾಯುಪಡೆಯ ಅಧಿಕಾರಿಯದ್ದೇ ತಪ್ಪು ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅವರನ್ನು ಬಂಧಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. ಅಲ್ಲದೆ, ʼಟೈಮ್ಸ್ ನೌʼ ಸೇರಿದಂತೆ ಘಟನೆ ಕುರಿತು ಕನ್ನಡಿಗರ ವಿರುದ್ಧ ಏಕಪಕ್ಷೀಯವಾಗಿ ವರದಿ ಮಾಡಿದ ಮಾಧ್ಯಮಗಳನ್ನೂ ಜನರು ತರಾಟೆಗೆ ತೆಗೆದಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಳಕೆದಾರರೊಬ್ಬರು, "ಈತನ ಕೃತ್ಯವು ವಾಯುಪಡೆಯ ಪಾಲಿಗೆ ನಾಚಿಕೆಗೇಡಿನದಾಗಿದೆ. ಈತನನ್ನು ಕೃತ್ಯಕ್ಕೆ ಹೊಣೆಗಾರನನ್ನಾಗಿಸಬೇಕಿದೆ" ಎಂದು ಆಗ್ರಹಿಸಿದ್ದಾರೆ.

"ಅಣ್ಣ, ಇದನ್ನು ಉತ್ತರ ಪ್ರದೇಶ/ಬಿಹಾರ ಎಂದುಕೊಂಡಿದ್ದು, ಕನ್ನಡದ ಹುಡುಗನನ್ನು ಸಿಲುಕಿಸಲು ಸುಳ್ಳು ಕತೆಯನ್ನು ಹೆಣೆದಿದ್ದಾನೆ. ಆದರೆ, ತಪ್ಪು ನೆಲ, ತಪ್ಪು ಚಿತ್ರಕತೆ. ಇದು ಕರ್ನಾಟಕ. ಎಲ್ಲವನ್ನೂ ಹಾಗೂ ಎಲ್ಲರನ್ನು ಇಲ್ಲಿ ಪರಿಶೀಲಿಸಲಾಗುತ್ತದೆ. ನೀನು ಉದ್ಯೋಗ ಕಳೆದುಕೊಂಡು, ಕೋಲ್ಕತ್ತಾದ ಬೀದಿಗೆ ಬೀಳುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ" ಎಂದು r./stfu ಹೆಸರಿನ ಖಾತೆಯ ಬಳಕೆದಾರರೊಬ್ಬರು ಘಟನೆಯ ಕುರಿತು ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ.

"ರಸ್ತೆ ಗಲಾಟೆಯನ್ನು ಭಾಷಾ ವಿಷಯವೆಂದು ತಿರುಚಿದ ಈ ಗೂಂಡಾ ಸೇನಾಧಿಕಾರಿಗೆ ಸೇನೆಯಲ್ಲಿರಲು ಯೋಗ್ಯತೆ ಇಲ್ಲ. ಇವನನ್ನು ವಜಾಗೊಳಿಸಿ" ಎಂದು ಆರ್ಯ ಎಂಬ ಹೆಸರಿನ ಬಳಕೆದಾರರೊಬ್ಬರು ಒತ್ತಾಯಿಸಿದ್ದಾರೆ.

ಇದಕ್ಕೂ ಮುನ್ನ, ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ನಡೆದಿದ್ದ ರಸ್ತೆ ಅಪಘಾತ ವಿಷಯಕ್ಕೆ ಸಂಬಂಧಿಸಿದಂತೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹಾಗೂ ವಿಕಾಸ್ ಕುಮಾರ್ ಎಂಬವವರ ನಡುವೆ ಘರ್ಷಣೆ ನಡೆದಿತ್ತು. ಈ ಸಂಬಂಧ, ತಮ್ಮ ಪತಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್‌ರ ಪತ್ನಿ ಮಧುಮಿತಾ ದತ್ತ ನೀಡಿದ್ದ ದೂರನ್ನು ಆಧರಿಸಿ, ವಿಕಾಸ್ ಕುಮಾರ್ ಅವರನ್ನು ಬೈಯ್ಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದರು.

ಆದರೆ, ಶಿಲಾದಿತ್ಯ ಬೋಸ್ ಅವರೇ ವಿಕಾಸ್ ಕುಮಾರ್ ಮೇಲೆ ಹಲ್ಲೆ ನಡೆಸಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಬೆಳಕಿಗೆ ಬಂದಿತ್ತು. ಈ ದೃಶ್ಯಾವಳಿಗಳನ್ನು ಆಧರಿಸಿ, ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109, 115 (2), 304, 324 ಹಾಗೂ 352ರ ಅಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News