ಅಶೋಕ್ ನನ್ನ ಹೇಳಿಕೆ ತಿರುಚಿ ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ: ಸಚಿವ ಝಮೀರ್ ಅಹ್ಮದ್ ಆಕ್ರೋಶ
ಬೆಂಗಳೂರು : ಪ್ರತಿಪಕ್ಷ ನಾಯಕ ಅಶೋಕ್ ಅವರು ನನ್ನ ಹೇಳಿಕೆ ತಿರುಚಿ ಅದರಲ್ಲೂ ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದ್ದು, ಬಿಜೆಪಿಯವರ ರಾಜಕೀಯ ದಾರಿದ್ರ್ಯ ಎತ್ತಿ ತೋರಿಸುತ್ತದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹಮದ್ ಖಾನ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಚನ್ನಪಟ್ಟಣ ಉಪ ಚುನಾವಣೆ ಪ್ರಚಾರದಲ್ಲಿ ನಾನು ಒಕ್ಕಲಿಗರನ್ನು -ಹಿಂದುಗಳನ್ನು ಖರೀದಿಸುತ್ತೇನೆ ಎಂದು ಹೇಳಿರುವುದಾಗಿ ಅಶೋಕ್ ಅವರು ಅಪ ಪ್ರಚಾರ ಮಾಡುತ್ತಿರುವುದು ಅವರ ಹುದ್ದೆಯ ಘನತೆಗೆ ಶೋಭೆ ತರುವುದಿಲ್ಲ. ನಾನು ಆ ರೀತಿಯ ಪದವನ್ನು ಬಳಸಿಯೇ ಇಲ್ಲ, ಇದು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.
ಮುಸ್ಲಿಂ ಮತ ಬೇಡ ಎನ್ನುವ ಕುಮಾರಸ್ವಾಮಿ ಅವರು ಹಣ ಕೊಟ್ಟು ನಮ್ಮ ಸಮುದಾಯದ ಮತ ಖರೀದಿಗೆ ಮುಂದಾಗಿರುವ ಬಗ್ಗೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದೇನೆ. ನಮ್ಮ ಸಮುದಾಯವೇ ಪೈಸೆ ಪೈಸೆ ಹಣ ಸೇರಿಸಿ ನಿಮಗೆ ಕೊಡುತ್ತದೆ ಬೇಕಾದರೆ, ನಾವು ಖರೀದಿ ಆಗಲ್ಲ ಎಂದು ಹೇಳಿದ್ದೆ. ಅದು ಕುಮಾರಸ್ವಾಮಿಗೆ ಸೀಮಿತ. ಒಕ್ಕಲಿಗ ಸಮುದಾಯ ಅಥವಾ ಹಿಂದೂ ಪದ ಬಳಸಿಯೇ ಇಲ್ಲ. ಆದರೆ ಅಶೋಕ್ ಅವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸನ್ಮಾನ್ಯ ಅಶೋಕ್ ಅವರೇ, ನಾನು ರೈತನ ಮಗ. ದೇವೇಗೌಡರು ನನ್ನ ರಾಜಕೀಯ ಗುರುಗಳು. ಅವರ ಬಗ್ಗೆ ಅಪಾರ ಗೌರವ ಇದೆ. ನಾನು ಮೊದಲು ಹಿಂದೂಸ್ತಾನಿ, ಕನ್ನಡಿಗ ಆಮೇಲೆ ಮುಸ್ಲಿಂ ಎಂದು ಸಾಕಷ್ಟು ಬಾರಿ ಹೇಳಿದ್ದೇನೆ. ಪ್ರತಿ ವಿಚಾರದಲ್ಲಿ ರಾಜಕೀಯ ಮಾಡುವ ನಿಮ್ಮ ಬಗ್ಗೆ ಕನಿಕರ ಇದೆ ಎಂದು ಹೇಳಿದ್ದಾರೆ.