ಕೇಂದ್ರ ಬಜೆಟ್ | ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7564 ಕೋಟಿ ರೂ.ಹಂಚಿಕೆ : ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

Update: 2025-02-03 20:40 IST
ಕೇಂದ್ರ ಬಜೆಟ್ | ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7564 ಕೋಟಿ ರೂ.ಹಂಚಿಕೆ : ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
  • whatsapp icon

ಬೆಂಗಳೂರು : 2025-26ನೇ ಸಾಲಿನ ಕೇಂದ್ರ ಸರಕಾರದ ಬಜೆಟ್‍ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ 7564 ಕೋಟಿ ರೂ.ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.

ದಕ್ಷಿಣ ಭಾರತದ ರಾಜ್ಯಗಳ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಬಜೆಟ್‍ನಲ್ಲಿ ಹಂಚಿಕೆಯಾಗಿರುವ ಅನುದಾನದ ಕುರಿತು ಹೊಸದಿಲ್ಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು.

ಯುಪಿಎ ಸರಕಾರದ ಅವಧಿಯಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ ಹಂಚಿಕೆಯಾಗುತ್ತಿದ್ದ ಅನುದಾನಕ್ಕಿಂತ 9 ಪಟ್ಟು ಹೆಚ್ಚು ಇದಾಗಿದೆ. ರೈಲ್ವೆ ಮಾರ್ಗ ವಿದ್ಯುದ್ಧೀಕರಣವು ಪ್ರತಿ ವರ್ಷ 18 ಕಿ.ಮೀ. ಆಗುತ್ತಿತ್ತು. ಆದರೆ, ಈಗ ಸುಮಾರು 300 ಕಿ.ಮೀ ಆಗುತ್ತಿದೆ. ಈಗಾಗಲೇ ಶೇ.97ರಷ್ಟು ರೈಲ್ವೆ ಮಾರ್ಗ ಕರ್ನಾಟಕದಲ್ಲಿ ವಿದ್ಯುದ್ಧೀಕರಣ ಆಗಿದೆ. ಇನ್ನುಳಿದ ಶೇ.3ರಷ್ಟನ್ನು 2025-26ನೆ ಆರ್ಥಿಕ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.

2014ರಿಂದ ಈವರೆಗೆ ಕರ್ನಾಟಕದಲ್ಲಿ 1652 ಕಿ.ಮೀ. ರೈಲ್ವೆ ಹೊಸ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ. ಇದು ಶ್ರೀಲಂಕಾ ದೇಶದ ಒಟ್ಟಾರೆ ರೈಲ್ವೆ ಮಾರ್ಗಕ್ಕಿಂತ ಹೆಚ್ಚಾಗಿದೆ. 61 ರೈಲ್ವೆ ನಿಲ್ದಾಣಗಳನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಜೊತೆಗೆ, ಹೊಸ ಮಾರ್ಗಗಳು, ಡಬ್ಲಿಂಗ್, ಗೇಜ್ ಪರಿವರ್ತನೆ, ಕಾರ್ಯಾಗಾರಗಳ ಉನ್ನತೀಕರಣಕ್ಕಾಗಿ ಕರ್ನಾಟಕಕ್ಕೆ 51,479 ಕೋಟಿ ರೂ.ಹೂಡಿಕೆ ಬಂದಿದೆ. 10 ವಂದೇ ಭಾರತ್ ರೈಲುಗಳು ಕರ್ನಾಟಕದಲ್ಲಿ ಸಂಚರಿಸುತ್ತಿವೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.

ಕೇರಳ ರಾಜ್ಯದ ರೈಲ್ವೆ ಯೋಜನೆಗಳಿಗೆ ಈ ಬಾರಿ ಬಜೆಟ್‍ನಲ್ಲಿ 3042 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಯುಪಿಎ ಸರಕಾರದ ಅವಧಿಯಲ್ಲಿ ಪ್ರತಿ ವರ್ಷ 372 ಕೋಟಿ ರೂ.ಗಳು ಸಿಗುತ್ತಿತ್ತು. 15,742 ಕೋಟಿ ರೂ. ಹೂಡಿಕೆ ಬಂದಿದೆ. 35 ರೈಲ್ವೆ ನಿಲ್ದಾಣಗಳನ್ನು ಅಮೃತ್ ಯೋಜನೆಯಡಿ ಪುನರ್ ಅಭಿವೃದ್ಧಿಗೊಳಿಸಲಾಗಿದೆ. ಎರಡು ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ ಎಂದು ಅವರು ಹೇಳಿದರು.

ತಮಿಳುನಾಡು ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗೆ 6626 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಯುಪಿಎ ಅವಧಿಯಲ್ಲಿ 879 ಕೋಟಿ ರೂ.ಗಳು ಹಂಚಿಕೆಯಾಗುತ್ತಿತ್ತು. 1303 ಕಿ.ಮೀ. ಹೊಸ ರೈಲ್ವೆ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ. 77 ರೈಲ್ವೆ ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಗೊಳಿಸಲಾಗಿದೆ. 39,270 ಕೋಟಿ ರೂ.ಗಳ ಹೂಡಿಕೆ ಬಂದಿದೆ. ಎಂಟು ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.

ಗೋವಾ ರಾಜ್ಯದಲ್ಲಿ ಪ್ರತ್ಯೇಕ ಕೊಂಕಣ್ ರೈಲ್ವೆ ಕಂಪೆನಿ ಇರುವುದರಿಂದ, ಕೇಂದ್ರ ಸರಕಾರದ ಅನುದಾನ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಈ ವರ್ಷ ಗೋವಾ ರಾಜ್ಯಕ್ಕೆ 438 ಕೋಟಿ ರೂ.ಗಳ ಅನುದಾನ ರೈಲ್ವೆ ಯೋಜನೆಗಳಿಗೆ ಒದಗಿಸಲಾಗಿದೆ. 5,696 ಕೋಟಿ ರೂ.ಗಳ ಹೂಡಿಕೆ ಬಂದಿದೆ ಎಂದು ಅವರು ಮಾಹಿತಿ ನೀಡಿದರು.

2025-26ರಲ್ಲಿ ರೈಲ್ವೆಯಲ್ಲಿ ಸುರಕ್ಷತೆಗಾಗಿ 1.16 ಲಕ್ಷ ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ. ಹಳೆ ರೈಲ್ವೆ ಹಳಿಗಳನ್ನು ಮುಂದಿನ ನಾಲ್ಕೈದು ವರ್ಷಗಳಲ್ಲಿ ಸಂಪೂರ್ಣವಾಗಿ ಬದಲಾಯಿಸಲು ಅಭಿಯಾನದ ರೂಪದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. 50 ಹೊಸ ವಂದೇ ಭಾರತ್ ರೈಲುಗಳಿಗೆ ಅನುಮೋದನೆ ಲಭಿಸಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.

100 ರಿಂದ 200 ಕಿ.ಮೀ. ಅಂತರದ ನಗರಗಳನ್ನು ಸಂಪರ್ಕಿಸಲು 50 ನಮೋ ಭಾರತ್ ರೈಲುಗಳನ್ನು ಆರಂಭಿಸಲಾಗುವುದು. ಅಹಮದಾಬಾದ್ ನಿಂದ ಭುಜ್ ನಡುವೆ ಆರಂಭಿಸಿರುವ ನಮೋ ಭಾರತ್ ರೈಲಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಮೋ ಭಾರತ್ ರೈಲುಗಳು ನಗರಗಳ ನಡುವಿನ ಸಂಚಾರ ವ್ಯವಸ್ಥೆಯನ್ನು ಉತ್ತಮಪಡಿಸಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಜೊತೆಗೆ, 100 ಅಮೃತ್ ಭಾರತ್ ರೈಲುಗಳು, 200 ವಂದೇ ಭಾರತ್ ಯೋಜನೆಗಳನ್ನು ಆರಂಭಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. 1000 ಹೊಸ ಮೇಲ್ಸೆತುವೆ ಹಾಗೂ ಕೆಳ ಸೇತುವೆಗಳನ್ನು ನಿರ್ಮಾಣ ಮಾಡಲಾಗುವುದು. ಕಳೆದ ವರ್ಷ 1020 ಮೇಲ್ಸೆತುವೆ ಹಾಗೂ ಕೆಳ ಸೇತುವೆಗಳನ್ನು ನಿರ್ಮಾಣ ಮಾಡಿದ್ದು ದಾಖಲೆಯಾಗಿದೆ ಎಂದು ಅವರು ತಿಳಿಸಿದರು.

ರೈಲ್ವೆ ಯೋಜನೆಗಳು ತ್ವರಿತವಾಗಿ ಪೂರ್ಣಗೊಳಿಸಲು ರಾಜ್ಯ ಸರಕಾರವು ಅಗತ್ಯ ಸಹಕಾರ ನೀಡಬೇಕು. ಭೂ ಸ್ವಾಧೀನ ಪ್ರಕ್ರಿಯೆಯನ್ನು ಬೇಗ ಮಾಡಿಕೊಟ್ಟರೆ ರೈಲ್ವೆ ಯೋಜನೆಗಳ ಅನುಷ್ಠಾನ ಶೀಘ್ರವಾಗುತ್ತದೆ. 14 ಸಾವಿರ ಹೊಸ ಹವಾನಿಯಂತ್ರಿತ ರಹಿತ ಕೋಚ್‍ಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಹಂತ ಹಂತವಾಗಿ ಅವುಗಳನ್ನು ರೈಲುಗಳಿಗೆ ಜೋಡಿಸುವ ಕೆಲಸ ಮಾಡಲಿದ್ದೇವೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನಡೆಸಿದ ಪತ್ರಿಕಾಗೋಷ್ಠಿಯ ನೇರ ಪ್ರಸಾರದ ವ್ಯವಸ್ಥೆಯನ್ನು ಬೆಂಗಳೂರಿನ ವಿಭಾಗೀಯ ರೈಲ್ವೆ ಕಾರ್ಯಾಲಯದಲ್ಲಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಮಿತೇಶ್ ಕುಮಾರ್ ಸಿನ್ಹಾ, ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಶುತೋಷ್ ಮಾಥುರ್, ಪರೀಕ್ಷಿತ್ ಮೋಹನ್‍ಪುರಿಯ, ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಾಣೇಶ್ ಕೆ.ಎನ್. ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News