ಸಾಮಾಜಿಕ ಮಾಧ್ಯಮಗಳಲ್ಲಿ ಕವಿ ಹುಲಿಕುಂಟೆ ಮೂರ್ತಿ ಮೇಲಿನ ದಾಳಿ ಸಲ್ಲ: ಬಹುತ್ವ ಕರ್ನಾಟಕ
ಬೆಂಗಳೂರು, ಜು.20: ದಲಿತ ಚಳವಳಿಗಾರ, ಕವಿ ಹುಲಿಕುಂಟೆ ಮೂರ್ತಿ ತಮ್ಮ ಫೇಸ್‍ಬುಕ್ ಪುಟದಲ್ಲಿ ವಿಜ್ಞಾನಿಗಳಲ್ಲಿ ವೈಜ್ಞಾನಿಕ ಮನೋಭಾವದ ಕೊರತೆಯ ಕುರಿತು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದನ್ನೆ ನೆಪವಾಗಿಸಿಕೊಂಡು ಕೆಲವರು ಹುಲಿಕುಂಟೆ ಮೂರ್ತಿ ಹಾಗೂ ಅವರ ಕುಟುಂಬದ ಮೇಲಿನ ದಾಳಿ ನಡೆಸುತ್ತಿರುವುದನ್ನು ಬಹುತ್ವ ಕರ್ನಾಟಕ ಬಲವಾಗಿ ಖಂಡಿಸಿದೆ.
ಗುರುವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಂಘಟನೆಯು ಪತ್ರವನ್ನು ಬರೆದಿದ್ದು, ‘ಹುಲಿಕುಂಟೆ ಮೂರ್ತಿ ಓರ್ವ ಉಪನ್ಯಾಸಕ ಹಾಗೂ ಬರಹಗಾರರಾಗಿ ಶಿಕ್ಷಣ ಇಲಾಖೆಗೆ ಒಂದು ದೊಡ್ಡ ಆಸ್ತಿಯಂತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಂಡು ಬರುವ ಅಭಿಪ್ರಾಯಗಳನ್ನು ಸಾರ್ವಜನಿಕ ಸ್ಥಳದಲ್ಲಿ ಆಡಿರುವ ಅಭಿಪ್ರಾಯಗಳೆಂದು ಪರಿಗಣಿಸಬೇಕಾಗುತ್ತದೆ. ಏಕೆಂದರೆ ಇಂತಹ ಅಭಿಪ್ರಾಯಗಳು/ಸಂದೇಶಗಳು ಗುರಿಯಾಗಿಸಿದ ವ್ಯಕ್ತಿಗಳ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಬೀರಬಹುದಾಗಿರುತ್ತದೆ, ಈ ಪ್ರಕರಣದಲ್ಲಿ ಹುಲಿಕುಂಟೆ ಮೂರ್ತಿ ಹಾಗೂ ಅವರ ಕುಟುಂಬ ಸಂತ್ರಸ್ತರಾಗಿದ್ದಾರೆ ಎಂದು ತಿಳಿಸಿದೆ.
ಹುಲಿಕುಂಟೆ ಮೂರ್ತಿ ಮೇಲಿನ ಉದ್ದೇಶಪೂರ್ವಕ ದಾಳಿಯು ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳ(ದೌರ್ಜನ್ಯಗಳ ವಿರುದ್ಧ ತಡೆ) ತಡೆ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಬಹುದಾಗಿದೆ. ಈ ದ್ವೇಷ ಪ್ರಚಾರ, ಭಾರತೀಯ ಕಾನೂನಿನಡಿ, ಅಂದರೆ ಸ್ಪಷ್ಟವಾಗಿ ಭಾರತೀಯ ದಂಡ ಸಂಹಿತೆ, 1860ರ ಕಲಂ 153(ಬಿ) ಅಡಿ ದ್ವೇಷ ಪ್ರಚಾರವಾಗಿದೆ ಎಂದು ಸಂಘಟನೆ ಪ್ರಕಟನೆಯಲ್ಲಿ ಟೀಕಿಸಿದೆ.