ಭಂಡತನ, ಹುಡುಗಾಟಿಕೆ ಬಿಟ್ಟು ರಾಜೀನಾಮೆ ಕೊಡಿ : ಸಿಎಂಗೆ ಬಿ.ವೈ.ವಿಜಯೇಂದ್ರ ಒತ್ತಾಯ

Update: 2024-10-19 10:38 GMT

ಬೆಂಗಳೂರು: "ದಿಲ್ಲಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಅರವಿಂದ ಕೇಜ್ರಿವಾಲ್ ಅವರ ಪರಿಸ್ಥಿತಿಯನ್ನು ದೇಶ, ರಾಜ್ಯದ ಜನರು ನೋಡಿದ್ದಾರೆ. ಸುತ್ತಿ ಬಳಸಿ ಮಾತನಾಡುವುದಿಲ್ಲ, ನೇರವಾಗಿ ಹೇಳುತ್ತೇನೆ. ಮುಖ್ಯಮಂತ್ರಿಗಳು ಭಂಡತನ, ಹುಡುಗಾಟಿಕೆ ಬಿಟ್ಟು ರಾಜೀನಾಮೆ ಕೊಡಬೇಕು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ʼಸಿಎಂ ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡಿನ ಬೆಂಬಲ ಇದೆ ಎಂಬಂತೆ ವರ್ತಿಸುತ್ತಿದ್ದಾರೆ. ಎಸ್‍ಟಿ ಅಭಿವೃದ್ಧಿ ನಿಗಮದಲ್ಲಿ ದೋಚಿದ ಹಣವು ಕಾಂಗ್ರೆಸ್ ಹೈಕಮಾಂಡಿಗೆ ತಲುಪಿದೆ ಎಂಬ ವಿಷಯವೂ ಕೇಳಿಬರುತ್ತಿದೆ. ಆದ್ದರಿಂದ ಹೈಕಮಾಂಡ್ ಸಿದ್ದರಾಮಯ್ಯರ ಪರ ನಿಂತಿದೆ ಎಂಬುದು ದೊಡ್ಡ ವಿಚಾರವಲ್ಲ. ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದ ವಿಚಾರಗಳು, ಜನಪ್ರತಿನಿಧಿಗಳ ಕೋರ್ಟಿನ ಆದೇಶದ ಕುರಿತು ಸಿದ್ದರಾಮಯ್ಯನವರು ಇನ್ನೊಂದು ಬಾರಿ ಓದಿದರೆ ತಕ್ಷಣ ರಾಜೀನಾಮೆ ಕೊಡಲು ಅವರಿಗೂ ಅನುಕೂಲವಾಗುತ್ತದೆʼ ಎಂದರು.

ಬಿಜೆಪಿಯವರಿಗೆ ತಲೆ ಕೆಟ್ಟಿದೆ ಎಂಬಂತೆ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು. 62 ಕೋಟಿ ಪರಿಹಾರ ಅಪೇಕ್ಷಿಸದೆ 14 ನಿವೇಶನ ಹಿಂತಿರುಗಿಸುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ. ಹೈಕೋರ್ಟಿನ ತೀರ್ಪು, ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಬಳಿಕವೂ ಮುಖ್ಯಮಂತ್ರಿಗಳು ತಮ್ಮ ಭಂಡತನ ಮುಂದುವರೆಸಿದ್ದಾರೆ ಎಂದು ಆಕ್ಷೇಪಿಸಿದರು.

ನಿರಪರಾಧಿ ಎಂಬಂತೆ ಬಿಂಬಿಸಿಕೊಳ್ಳುವ ಪ್ರಯತ್ನ :

ʼಈ.ಡಿ. ಅಖಾಡಕ್ಕೆ ಇಳಿದಿದೆ. ಮೈಸೂರು ಮುಡಾ ಮೇಲೆ ದಾಳಿಯನ್ನೂ ನಡೆಸಿದೆ. ಇವತ್ತು ಕೂಡ ದಾಳಿ ಮುಂದುವರೆದಿದೆ. ಆದರೆ, ಮುಖ್ಯಮಂತ್ರಿಗಳು ತಾನು ನಿರಪರಾಧಿ ಎಂಬಂತೆ ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರೆ. ಈ.ಡಿ. ಕೇಂದ್ರ ಸರಕಾರದ ಕೈಗೊಂಬೆ ಎನ್ನುವ ರೀತಿಯಲ್ಲಿ ಟೀಕಿಸುತ್ತಿದ್ದಾರೆ. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬ ಭಾವನೆಯಲ್ಲಿ ಮುಖ್ಯಮಂತ್ರಿಗಳು ಇದ್ದಂತಿದೆʼ ಎಂದು ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News