ಬೆಂಗಳೂರು | ಹೊಸ ಮೆಟ್ರೋ ಮಾರ್ಗ ಡಬಲ್ ಡೆಕ್ಕರ್ ಮಾದರಿಯಲ್ಲಿ ನಿರ್ಮಾಣ : ಡಿ.ಕೆ.ಶಿವಕುಮಾರ್
ಬೆಂಗಳೂರು: ಮುಂದಿನ ದಿನಗಳಲ್ಲಿ ಹೊಸ ಮೆಟ್ರೊ ಮಾರ್ಗಗಳನ್ನು ಡಬಲ್ ಡೆಕ್ಕರ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬುಧವಾರ ಜಯನಗರದ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‍ವರೆಗೆ ಡಬಲ್ ಡೆಕ್ಕರ್ ಮಾರ್ಗದಲ್ಲಿ ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಭೂಸ್ವಾಧೀನ ಮಾಡಿಕೊಳ್ಳುವುದು ಕಷ್ಟದ ಕೆಲಸ. ಆದರೆ, ಡಬಲ್ ಡೆಕ್ಕರ್ ಮಾದರಿಯಿಂದ ಸಂಚಾರ ದಟ್ಟಣೆ ಸೇರಿದಂತೆ ಅನೇಕ ಉಪಯೋಗಗಳಿವೆ. ಹೆಚ್ಚು ಖರ್ಚಾದರೂ ಈ ಮಾದರಿ ಬೆಂಗಳೂರಿಗೆ ಅನುಕೂಲ. ಪ್ರಸ್ತುತ 5 ಕಾಲು ಕಿ.ಮೀ ಉದ್ದ ಡಬಲ್ ಡೆಕ್ಕರ್ ನಿರ್ಮಾಣಕ್ಕೆ ಸುಮಾರು 450 ಕೋಟಿ ರೂ.ಖರ್ಚಾಗಿದೆ ಎಂದರು.
ಬೆಂಗಳೂರಿನಲ್ಲಿ 100 ಕಿ.ಮೀ ಉದ್ದ ಸಿಗ್ನಲ್ ಫ್ರೀ ಕಾರಿಡಾರ್ ಮಾಡಲು 120ರಿಂದ150 ಕೋಟಿ ಖರ್ಚಾಗುತ್ತದೆ ಎಂದು ಅಧಿಕಾರಿಗಳು ಅಂದಾಜು ವೆಚ್ಚ ತಿಳಿಸಿದ್ದಾರೆ. ವಿಶ್ವದರ್ಜೆ ಗುಣಮಟ್ಟದ ಡಬಲ್ ಡೆಕ್ಕರ್ ನಿರ್ಮಾಣ ಮಾಡಿದ್ದೇವೆ. ಬಿಬಿಎಂಪಿ ಮತ್ತು ಬಿಎಂಆರ್ ಸಿಎಲ್ ಈ ಯೋಜನೆಯ ವೆಚ್ಚವನ್ನು ಹಂಚಿಕೊಳ್ಳುತ್ತಾರೆ ಎಂದು ವಿವರಿಸಿದರು.
ಇನ್ನೂ, ಹೊಸೂರು ರಸ್ತೆ ಕಡೆ ತೆರಳುವ ಸುಮಾರು ಶೇ.30 ರಷ್ಟು ನಾಗರೀಕರಿಗೆ ಡಬಲ್ ಡೆಕ್ಕರ್ ನಿಂದ ಉಪಯೋಗವಾಗಲಿದೆ. ಎಲೆಕ್ಟ್ರಾನಿಕ್ ಸಿಟಿ, ಎಚ್‍ಎಸ್‍ಆರ್ ಲೇಔಟ್, ಮಹದೇವಪುರ ವಾಸಿಗಳಿಗೆ ಬಹಳ ಅನುಕೂಲವಾಗಲಿದೆ. 5 ಪಥಗಳುಳ್ಳ ಸುಮಾರು 9.5 ಕಿಮೀ ಉದ್ದವಿರುವ 5,745 ಕೋಟಿ ವೆಚ್ಚದಲ್ಲಿ ಆರ್ ವಿ ನಗರ ಮಹದೇವಪುರ ಎಲಿವೇಟೆಡ್ ಪೇಸ್ 2 ಯೋಜನೆಯನ್ನು ಜಾರಿಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದೂ ಅವರು ಉಲ್ಲೇಖಿಸಿದರು.
ಡಬಲ್ ಡೆಕ್ಕರ್ ಮಾದರಿಯನ್ನು ಅಧ್ಯಯನ ಮಾಡಲು ರಾಜ್ಯದಿಂದ ಅಧಿಕಾರಿಗಳ ತಂಡವನ್ನು ನಾಗ್ಪುರಕ್ಕೆ ಕಳುಹಿಸಿದ್ದೆ. ಡಬಲ್ ಡೆಕ್ಕರ್ ನಿರ್ಮಾಣವಾಗಲು ಹಿಂದೆ ಇರುವ ಶಕ್ತಿ ಸಚಿವ ರಾಮಲಿಂಗಾರೆಡ್ಡಿ ಆಗಿದ್ದು, ಬೆಂಗಳೂರಿನಲ್ಲಿ ಎಲ್ಲೆಲ್ಲಿ ಈ ಯೋಜನೆ ಜಾರಿಯಾದರೂ ಅದನ್ನು ರಾಮಲಿಂಗಾರೆಡ್ಡಿ ಮಾಡೆಲ್ ಎಂದು ಹೇಳುತ್ತೇನೆ ಎಂದ ಅವರು, ಡಬಲ್ ಡೆಕ್ಕರ್ ಯೋಜನೆಯ ಉಪಯೋಗ ತಿಳಿಯಲು ಜನರು ಮೇಲೆ ಹಾಗೂ ಕೆಳಗೆ ಸಂಚರಿಸಿ ಅನುಭವ ಪಡೆಯಬೇಕು. ಈ ಯೋಜನೆ ವೀಕ್ಷಿಸಲು ನೂತನ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಗೂ ಮನವಿ ಮಾಡಲಾಗುವುದು. ಪ್ರಾಯೋಗಿಕ ಸಂಚಾರ ನಡೆಸಿದ ಮೇಲೆ ಒಂದಷ್ಟು ಕುಂದುಕೊರತೆಗಳು ತಿಳಿಯುತ್ತವೆ. ಇದೆಲ್ಲವನ್ನು ಬಗೆಹರಿಸಿ ಜನರ ಓಡಾಟಕ್ಕೆ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಸತೀಶ್ ರೆಡ್ಡಿ, ರಾಮಮೂರ್ತಿ, ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್, ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್, ಕಾರ್ಯದರ್ಶಿ ರಾಜೇಂದ್ರ ಚೋಳನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.