ಬೆಂಗಳೂರು ‘ಟೆಕ್ ಸಮ್ಮಿಟ್-2023’ ಯಶಸ್ವಿ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಬೆಂಗಳೂರು ಟೆಕ್ ಸಮ್ಮಿಟ್-2023 ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬಯೋಟೆಕ್ನಾಲಜಿ ಹಾಗೂ ಆನಿಮೇಷನ್, ವಿಷುಯಲ್ ಎಫೆಕ್ಟ್, ಗೇಮಿಂಗ್ ಹಾಗೂ ಕಾಮ್ಸಿಕ್‍ಗೆ ಸಂಬಂಧಿಸಿದ ನೀತಿಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಐಟಿ ಹಾಗೂ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಶುಕ್ರವಾರ ಬೆಂಗಳೂರು ಅರಮನೆಯಲ್ಲಿ ನಡೆದ ಬೆಂಗಳೂ ಟೆಕ್ ಸಮ್ಮಿಟ್‍ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಸಮ್ಮಿಟ್‍ನಲ್ಲಿ 45 ದೇಶಗಳು ಭಾಗವಹಿಸಿದ್ದು, 83 ಅಧಿವೇಶನಗಳು ನಡೆದಿವೆ. ಒಟ್ಟು 401 ಭಾಷಣಕಾರರು ವಿವಿಧ ವಿಷಯಗಳ ಕುರಿತು ಮಾತನಾಡಿದ್ದಾರೆ. 4,773 ನೋಂದಾಯಿತ ಪ್ರತಿನಿಧಿಗಳಿದ್ದರೆ, ಈ ಸಮ್ಮಿಟ್‍ನಲ್ಲಿ 8,606 ಮಂದಿ ಪಾಲ್ಗೊಂಡಿದ್ದರು ಎಂದರು.
19 ಸಾವಿರ ನೋಂದಾಯಿತ ವ್ಯಾಪಾರಸ್ಥರಿದ್ದರು. 50 ಸಾವಿರಕ್ಕೂ ಅಧಿಕ ಮಂದಿ ಎಕ್ಸ್ ಪೊಗೆ ಭೇಟಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ 40 ಉತ್ಪನ್ನಗಳು ಹಾಗೂ ಸೇವೆಗಳನ್ನು ಬಿಡುಗಡೆ ಮಾಡಲಾಯಿತು. 600 ಪ್ರದರ್ಶಕರು ಭಾಗವಹಿಸಿದ್ದರು. ಪರಿಸರವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಈ ಸಮ್ಮಿಟ್ ಅನ್ನು ನಾವು ‘ಗ್ರೀನ್ ಬಿಟಿಎಸ್’ ಮಾಡುವುದಾಗಿ ಹೇಳಿದ್ದೆವು ಅದರಂತೆ ನಡೆದಿದ್ದೇವೆ ಎಂದು ಅವರು ಹೇಳಿದರು.
ಮೂರು ದಿನಗಳ ಈ ಸಮ್ಮಿಟ್‍ನ ಅವಧಿಯಲ್ಲಿ 6400 ಕೆಜಿ ತ್ಯಾಜ್ಯವನ್ನು ಪ್ರತ್ಯೇಕಿಸಿ ಮತ್ತು ಅದರ ಮರುಬಳಕೆ ಮಾಡಿದ್ದೇವೆ. ಶೇ.95ರಷ್ಟು ಪ್ಲಾಸ್ಟಿಕ್ ಬಳಕೆಯನ್ನು ಈ ವರ್ಷ ಕಡಿಮೆ ಮಾಡಿದ್ದೇವೆ. ಕಾರ್ಬನ್ ಬಳಕೆಯನ್ನು ತಲಾ 0.65 ಕೆ.ಜಿ ಕಡಿಮೆ ಮಾಡಿದ್ದೇವೆ. ನೀರಿನ ಬಳಕೆಯನ್ನು ತಲಾ 3.4 ಲೀಟರ್ ಗೆ ಇಳಿಸಿದ್ದೇವೆ. ಆಹಾರ ತ್ಯಾಜ್ಯದಿಂದ 90 ಕೆಜಿ ಜೈವಿಕ ಅನಿಲವನ್ನು ಉತ್ಪಾದಿಸಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಸಮ್ಮಿಟ್ ಸ್ಥಳದಲ್ಲಿ 427 ಬಿ2ಬಿ ಸಭೆಗಳು ಹಾಗೂ ವರ್ಚುವಲ್ ಆಗಿ 1981 ಸಭೆಗಳು ನಡೆದಿವೆ. 258 ಸ್ಟಾರ್ಟ್‍ಅಪ್‍ಗಳಾದ ಐಟಿ ಸರ್ವಿಸ್, ಎಐ ಮತ್ತು ಎಂಎಲ್, ಡಿಜಿಟಲ್ ಕಲಿಕೆ, ಮೊಬಿಲಿಟಿ, ಬ್ಲಾಕ್‍ಬೈನ್, ರೋಬೋ ಮತ್ತು ಡ್ರೋನ್, ಸೈಬರ್ ಸೆಕ್ಯೂರಿಟಿ, ಗೇಮಿಂಗ್, ಹೆಲ್ತ್ ಟೆಕ್, ಫಿನ್‍ಟೆಕ್, ಸ್ಮಾರ್ಟ್‍ಟೆಕ್ ಮತ್ತು ಅಗ್ರಿಟೆಕ್ ಸೇರಿದಂತೆ ಇತ್ಯಾದಿ ಕ್ಷೇತ್ರಗಳ ಸ್ಟಾರ್ಟ್‍ಅಪ್‍ಗಳು ಭಾಗವಹಿಸಿದ್ದವು ಎಂದು ಅವರು ವಿವರಿಸಿದರು.
ಆಸ್ಟ್ರೇಲಿಯ, ಡೆನ್ಮಾರ್ಕ್, ದಕ್ಷಿಣ ಕೊರಿಯಾ, ಜಪಾನ್, ಎನ್‍ಆರ್‍ಡಬ್ಲ್ಯೂಸಿಟಿ ಆಫ್ ಡಸೆಲ್ಡಾರ್ಫ್, ಥೈಲ್ಯಾಂಡ್, ಬ್ರಿಟಿಷ್ ಡೆಪ್ಯೂಟಿ ಹೈ ಕಮಿಷನ್, ಫಿನ್ಲ್ಯಾಂಡ್, ಇಸ್ರೇಲ್, ರಷ್ಯಾ ದೇಶದಿಂದ ಪ್ರತಿನಿಧಿಗಳು, ಕಾನ್ಸುಲರ್ ಜನರಲ್‍ಗಳು ಸೇರಿದಂತೆ ಇನ್ನಿತರ ಪ್ರಮುಖರು ಭಾಗಿಯಾಗಿದ್ದರು ಎಂದು ಅವರು ಹೇಳಿದರು.
ಭಾರತ ಯುಎಸ್ ಟೆಕ್ ಕಾನ್ಕ್ಲೇವ್ ಇಂಡಿಯಾ ಇನ್ನೋವೇಶನ್ ಅಲೈಯನ್ಸ್, 2022-2023ನೇ ಸಾಲಿನ ಪ್ರಶಸ್ತಿಗಳನ್ನು ವಿವಿಧ ವಿಭಾಗಗಳ ಅಡಿಯಲ್ಲಿ ಹಲವಾರು ಕಂಪೆನಿಗಳಿಗೆ ಎಸ್‍ಟಿಪಿಐ-ಐಟಿ ಪ್ರಶಸ್ತಿ ಪ್ರದಾನ, ಸ್ಮಾರ್ಟ್ ಬಯೋ ಪ್ರಶಸ್ತಿ ಪ್ರದಾನ, ಬೆಂಗಳೂರು ಇಂಪ್ಯಾಕ್ಟ್ ಪ್ರಶಸ್ತಿ ವಿಸಿ ಫೆಲಿಸಿಟೇಶನ್, ಗ್ರಾಮೀಣ ಐಟಿ ರಸಪ್ರಶ್ನೆ, ಬಯೋಕ್ವಿಜ್, ಬಯೋಪೋಸ್ಟರ್ ಗಳು ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದು ಅವರು ಹೇಳಿದರು .
ಎಸ್‍ಟಿಪಿಐ ವತಿಯಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಐಟಿ ಕಂಪನಿಗಳಿಗೆ 2022-2023ನೇ ವರ್ಷದ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಯಿತು. ಕರ್ನಾಟಕದ ಪ್ರತಿಷ್ಠಿತ ‘ಐಟಿ ರತ್ನ’ ಪ್ರಶಸ್ತಿಯು ಇನ್ಫೋಸಿಸ್ ಮತ್ತು ಇಂಟೆಲ್ ಕಂಪೆನಿ ಪಾಲಾಯಿತು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಐಟಿ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ, ಹೈ ಗ್ರೋಥ್ ಇನ್ ಐಟಿ, ಬೆಸ್ಟ್ ಪರ್ಫಾರ್ಮೆನ್ಸ್ ಇನ್ ಟಯರ್ 2 ಆಂಡ್ ಟಯರ್ 3, ಎಲೆಕ್ಟ್ರಾನಿಕ್ ಹಾರ್ಡ್‍ವೇರ್, ಎಕ್ಸ್‍ಪೋರ್ಟ್ ಪರ್ ಎಂಪ್ಲಾಯಿ ಆಂಡ್ ಎಂಪ್ಲಾಯ್ಮೆಂಟ್, ಹೈಯೆಸ್ಟ್ ನ್ಯೂ ಜಾಬ್ ಕ್ರಿಯೇಟರ್, ಹೈಯೆಸ್ಟ್ ಪರ್ ಎಂಪ್ಲಾಯಿ ಮತ್ತು ಹೈಯೆಸ್ಟ್ ಗ್ರೋಥ್ ಇನ್ ವುಮೆನ್ ಎಂಪ್ಲಾಯಿ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಯಿತು ಎಂದು ಅವರು ತಿಳಿಸಿದರು,
ಸ್ಮಾರ್ಟ್ ಬಯೋ ಅವಾಡ್ರ್ಸ್ ನೀಡಲಾಯಿತು. ರಾಜ್ಯ ಸರಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ ಅಂಡ್ ಟಿ ಇಲಾಖೆಯು ಬಿಟಿಎಸ್ ಕಾರ್ಯಕ್ರಮದ ಭಾಗವಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಹಭಾಗಿತ್ವದಲ್ಲಿ ರಸಪ್ರಶ್ನೆ ನಡೆಸಲಾಯಿತು ಎಂದು ಅವರು ಹೇಳಿದರು.
ದುಬೈ ಮತ್ತು ಅಬುಧಾಬಿಯಿಂದ ವಿಸಿ ಗಳ ಮುಂದೆ ಸುಮಾರು 20ಕ್ಕೂ ಹೆಚ್ಚು ಸ್ಟಾರ್ಟ್‍ಅಪ್‍ಗಳು ತಮ್ಮ ವಿನೂತನ ಆಲೋಚನೆಗಳನ್ನು ಹಂಚಿಕೊಂಡಿವೆ. ಪ್ರಮುಖವಾಗಿ ಕೃತಕ ಬುದ್ಧಿಮತ್ತೆ, ಬ್ಲಾಕ್‍ಚೈನ್, ವರ್ಧಿತ ರಿಯಾಲಿಟಿ, ಮೆಡ್ ಟೆಕ್, ಫಿನ್ ಟೆಕ್ಮಂಡ್ 3 ಡಿ ಪ್ರಿಂಟಿಂಗ್ ಸೇರಿದಂತೆ ಹಲವು ವಿಭಾಗದ ಸ್ಟಾರ್ಟ್‍ಅಪ್‍ಗಳು ಗಮನ ಸೆಳೆದವು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ನಗರಗಳಲ್ಲಿ ಪರಿಸರ ಹಾಗೂ ಮೂಲಸೌಕರ್ಯವನ್ನು ಸುಧಾರಿಸುವ ಕುರಿತು ಸಭೆ ನಡೆಸಲಾಯಿತು. ರಾಜ್ಯದಲ್ಲಿ ಮಹಿಳೆಯರ ನೇತೃತ್ವದ ಮತ್ತು ಮಹಿಳೆಯರು ಆರಂಭಿಸುವ ನವೋದ್ಯಮಗಳಿಗೆ ಅಗತ್ಯ ತರಬೇತಿ, ಪ್ರವೇಶವನ್ನು ನೀಡಲು ಗೂಗಲ್ ನೊಂದಿಗೆ ಕಾರ್ಯಕ್ರಮ ರೂಪಿಸಲಾಗಿದೆ. ಇದು ಡಿಜಿಟಲ್ ಮಾರ್ಕೆಟಿಂಗ್ ಮತ್ತು ಬ್ರಾಂಡ್‍ಬಿಲ್ಡಿಂಗ್' ಕುರಿತು ಮೌಲ್ಯಮಾಪನ ನಡೆಸಲಿದೆ ಎಂದು ಅವರು ಹೇಳಿದರು.
ಪಾಲುದಾರಿಕೆಯು ಯುಎಸ್‍ಐಬಿಸಿ ಸದಸ್ಯ ಕಂಪೆನಿಗಳು ಮತ್ತು ಸರಕಾರದ ನಡುವಿನ ಸಂವಹನ ಮಾರ್ಗಗಳನ್ನು ಉದ್ಯಮದ ಅನುಕೂಲ ಮತ್ತು ಕಾಪೆರ್ಪೊರೇಟ್ ಸಂವಾದದ ಅವಧಿಗಳ ಮೂಲಕ ಹೆಚ್ಚಿಸುತ್ತದೆ. ವೇಗದ ಟ್ರ್ಯಾಕ್ ಮೆಕ್ಯಾನಿಸಂ ರಾಜ್ಯ ಸರಕಾರ ಮತ್ತು ಯುಎಸ್‍ಐಬಿಸಿ ನಡುವೆ ವರ್ಧಿತ ಸಂವಹನ ಮಾರ್ಗಗಳನ್ನು ಸಕ್ರಿಯಗೊಳಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.