ಬೆಂಗಳೂರು ಸಂಚಾರ ದಟ್ಟಣೆ: ವಾರ್ಷಿಕ ಸುಮಾರು 20,000 ಕೋಟಿ ನಷ್ಟ!

Update: 2023-08-07 15:59 GMT

ಬೆಂಗಳೂರು ಸಂಚಾರ ದಟ್ಟಣೆ- ಫೈಲ್‌ ಚಿತ್ರ

ಬೆಂಗಳೂರು: ಬೆಂಗಳೂರು ತನ್ನ ಗದ್ದಲದ ತಂತ್ರಜ್ಞಾನ ಉದ್ಯಮಗಳು ಹಾಗೂ ಕುಖ್ಯಾತ ಸಂಚಾರ ದಟ್ಟಣೆಗೆ ಹೆಸರುವಾಸಿಯಾಗಿದೆ. ಸದ್ಯ ಬಿಡುಗಡೆಯಾಗಿರುವ ನೂತನ ವರದಿಯೊಂದರ ಪ್ರಕಾರ, ಈ ನಗರದಲ್ಲಿನ ಸಂಚಾರ ವಿಳಂಬ, ಸಂಚಾರ ದಟ್ಟಣೆ, ಸಿಗ್ನಲ್ ಬಳಿಯ ನಿಲುಗಡೆ, ಸಮಯ ನಷ್ಟ, ಇಂಧನ ನಷ್ಟ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳಿಂದ ವಾರ್ಷಿಕ ರೂ. 19,725 ಕೋಟಿಯಷ್ಟು ನಷ್ಟ ಅನುಭವಿಸುತ್ತಿದೆ ಎಂದು ndtv.com ವರದಿ ಮಾಡಿದೆ.

ಈ ಅಧ್ಯಯನವನ್ನು ಸಂಚಾರ ತಜ್ಞ ಎಂ.ಎನ್. ಶ್ರೀಹರಿ ಹಾಗೂ ಅವರ ತಂಡವು ನಡೆಸಿದ್ದು, ರಸ್ತೆ ಯೋಜನೆ, ಫ್ಲೈಓವರ್, ಸಂಚಾರ ನಿರ್ವಹಣೆ ಹಾಗೂ ಮೂಲಸೌಕರ್ಯದಲ್ಲಿನ ಕೊರತೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಗಮನ ಸೆಳೆದಿದೆ.

ನಗರದಲ್ಲಿ ಸಂಪೂರ್ಣವಾಗಿ ಕಾರ್ಯಾಚರಿಸುತ್ತಿರುವ 60 ಫ್ಲೈಓವರ್ ಗಳಿದ್ದರೂ, ಬೆಂಗಳೂರು ಪ್ರತಿ ವರ್ಷ ರಸ್ತೆ ವಿಳಂಬ, ಸಂಚಾರ ದಟ್ಟಣೆ, ಸಿಗ್ನಲ್ ಬಳಿ ನಿಲುಗಡೆಗಳು, ನಿಧಾನ ಗತಿಯಲ್ಲಿ ಚಲಿಸುವ ವಾಹನಗಳು ವೇಗವಾಗಿ ಚಲಿಸುತ್ತಿರುವ ವಾಹನಗಳ ನಡುವೆ ನುಸುಳುವುದು, ಇಂಧನ ನಷ್ಟ, ರಸ್ತೆ ಬಳಕೆದಾರರ ಸಮಯ ನಷ್ಟ, ವಾಹನಗಳ ಸಮಯ ನಷ್ಟವನ್ನು ರಸ್ತೆ ಬಳಕೆದಾರರ ಸಂಬಳ ಮತ್ತು ಇನ್ನಿತರ ಸಂಗತಿಗಳನ್ನು ಆಧರಿಸಿ ಹಣಕ್ಕೆ ಪರಿವರ್ತಿಸಿದಾಗ ರಸ್ತೆ ಬಳಕೆದಾರರು ವಾರ್ಷಿಕ ರೂ. 19,725 ಕೋಟಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮಾಹಿತಿ ತಂತ್ರಜ್ಞಾನ ವಲಯದಲ್ಲಿನ ಉದ್ಯೋಗ ಬೆಳವಣಿಗೆಯಿಂದಾಗಿ ಅಭಿವೃದ್ಧಿಗೆ ಸಂಬಂಧಿಸಿದ ವಸತಿ, ಶಿಕ್ಷಣದಂತಹ ಕೆಲವು ಹೆಸರಿಸಬಹುದಾದ ಸೌಲಭ್ಯಗಳಲ್ಲಿ ಬೆಳವಣಿಗೆಯಾಗಿದೆ. ಇದರಿಂದ ಜನಸಂಖ್ಯಾ ಪ್ರಮಾಣವು 1.45 ಕೋಟಿಯಷ್ಟು ಅಧಿಕವಾಗಿದ್ದು, ವಾಹನಗಳ ಸಂಖ್ಯೆ ಜನಸಂಖ್ಯೆಗೆ ಸಮನಾಗಿ 1.5 ಕೋಟಿಯಷ್ಟಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಅಂದಾಜಿನ ಪ್ರಕಾರ, 88 ಚದರ ಕಿಮೀ ವ್ಯಾಪ್ತಿ ಹೊಂದಿದ್ದ ಬೆಂಗಳೂರಿನ ವಿಸ್ತೀರ್ಣವು 2023ರ ವೇಳೆಗೆ 985 ಚದರ ಕಿಮೀ ವ್ಯಾಪ್ತಿಗೆ ವಿಸ್ತರಿಸಿದೆ. ನಗರವು 1,100 ಚದರ ಕಿಮೀಯಷ್ಟು ವಿಸ್ತಾರಗೊಳ್ಳಬೇಕಾದ ಅಗತ್ಯವಿದೆ ಎಂದು ವರದಿಯು ಪ್ರತಿಪಾದಿಸಿದೆ.

“ಮತ್ತೊಂದೆಡೆ, ವಾಹನ ಸಂಚಾರದ ಪ್ರಗತಿ ಹಾಗೂ ಪ್ರದೇಶಾಭಿವೃದ್ಧಿಗೆ ಹೋಲಿಸಿದರೆ ರಸ್ತೆಗಳ ಉದ್ದವು ಅದಕ್ಕೆ ಸಮನಾಗಿಲ್ಲ. ರಸ್ತೆಯ ಒಟ್ಟು ಉದ್ದವು ಸುಮಾರು 11,000 ಕಿಮೀಯಷ್ಟಿದ್ದು, ಈ ಉದ್ದವು ನಮ್ಮ ಸಾರಿಗೆ ಬೇಡಿಕೆ ಹಾಗೂ ಪ್ರಯಾಣದ ಆವರ್ತನವನ್ನು ಪೂರೈಸಲು ಸಾಕಾಗುವಷ್ಟಿಲ್ಲ” ಎಂದು ವರದಿಯಲ್ಲಿ ಹೇಳಲಾಗಿದೆ.

“ತೀವ್ರ ಪ್ರಮಾಣದ ಜನಸಂಖ್ಯಾ ಬೆಳವಣಿಗೆ ಹಾಗೂ ಅವರ ಉದ್ಯೋಗಾವಕಾಶಗಳ ವೇಗಕ್ಕೆ ಸಮನಾಗಿ ಸದ್ಯ ಅಸ್ತಿತ್ವದಲ್ಲಿರುವ ಮೂಲಸೌಕರ್ಯ ಬೆಳವಣಿಗೆಯು ಹೊಂದಾಣಿಕೆಯಾಗುತ್ತಿಲ್ಲ. ಈ ಕೊರತೆಯ ಅಂತರವು ಪ್ರತ್ಯಕ್ಷ ಮತ್ತು ಪರೋಕ್ಷ ವೆಚ್ಚದ ರೂಪದಲ್ಲಿ ವಿಳಂಬಗಳು, ಸಂಚಾರ ದಟ್ಟಣೆ, ಅಧಿಕ ಪ್ರಯಾಣ ಸಮಯ ಹಾಗೂ ಭಾರಿ ಆರ್ಥಿಕ ನಷ್ಟದಲ್ಲಿ ಅಂತ್ಯವಾಗುತ್ತಿದೆ” ಎಂದು ಅಧ್ಯಯನ ವರದಿ ಸಿದ್ಧಪಡಿಸಿರುವ ಸಂಚಾರ ತಜ್ಞ ಎಂ.ಎನ್.ಶ್ರೀಹರಿ ಮತ್ತು ತಂಡವು ಅಭಿಪ್ರಾಯ ಪಟ್ಟಿದೆ.

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News