‘ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1’ : ನನ್ನ ಮಾತನ್ನು ತಪ್ಪು ಅರ್ಥ ಬರುವಂತೆ ಬಿಂಬಿಸಲಾಗಿದೆ : ರಾಯರೆಡ್ಡಿ
ಬಸವರಾಜ ರಾಯರೆಡ್ಡಿ
ಬೆಂಗಳೂರು: ಕೊಪ್ಪಳದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದ ಮಾತುಗಳನ್ನು ಮಾಧ್ಯಮಗಳಲ್ಲಿ ತಪ್ಪು ಅರ್ಥ ಬರುವ ರೀತಿಯಲ್ಲಿ ಬಿಂಬಿಸಲಾಗಿದೆ. ಇದಕ್ಕೆ ನಾನು ಜವಾಬ್ದಾರನಲ್ಲ ಎಂದು ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎ.8ರಂದು ನಾನು ಕೊಪ್ಪಳದಲ್ಲಿನ ಸಭೆಯೊಂದರಲ್ಲಿ ಮಾತನಾಡುವ ವೇಳೆ ‘ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1’ ಆಗಿದೆ ಎಂದು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ್ದೇನೆ ಎಂದು ತಿಳಿಸಿದರು.
ಮೊದಲನೆಯದಾಗಿ ನಾನು ಸ್ಪಷ್ಟವಾಗಿ ಹೇಳುವುದೇನೆಂದರೆ, ಇದು ನನ್ನ ಪತ್ರಿಕಾ ಹೇಳಿಕೆಯಲ್ಲ. ನಾನು ಯಾವುದೇ ಪತ್ರಿಕಾಗೋಷ್ಠಿ ಮಾಡಿ ಇಂತಹ ಹೇಳಿಕೆ ನೀಡಿಲ್ಲ. ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದ ಮಾತುಗಳನ್ನು ಮಾಧ್ಯಮಗಳಲ್ಲಿ ತಪ್ಪು ಅರ್ಥ ಬರುವ ರೀತಿಯಲ್ಲಿ ಬಿಂಬಿಸಲಾಗಿದೆ. ಇದಕ್ಕೆ ನಾನು ಜವಾಬ್ದಾರನಲ್ಲ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.
ಕೊಪ್ಪಳದಲ್ಲಿ ಪ್ರಾದೇಶಿಕ ಅಸಮತೋಲನಾ ನಿವಾರಣೆಗಾಗಿನ ಡಿ.ಎಂ.ನಂಜುಂಡಪ್ಪ ವರದಿ ಕುರಿತು ಅಧ್ಯಯನ ನಡೆಸಲು ನೇಮಿಸಲಾದ ಸಮಿತಿಯು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿವರಣೆ ಪಡೆಯುವ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುವಾಗ, 'ಸರಕಾರದ ಕಾಮಗಾರಿಗಳಲ್ಲಿ ಗುಣಮಟ್ಟದ ಕೆಲಸ ನಡೆಯುತ್ತಿಲ್ಲ. ಹಿಂದೆಲ್ಲಾ ಐದಾರು ದಶಕ ಬಾಳಿಕೆ ಬರುತ್ತಿದ್ದ ಸರಕಾರಿ ಕಟ್ಟಡಗಳು 10 ವರ್ಷಗಳಲ್ಲಿಯೇ ಬಿದ್ದುಹೋಗುತ್ತಿವೆ ಎಂದು ನಾನು ಹೇಳಿದ್ದೆ ಎಂದು ಅವರು ತಿಳಿಸಿದರು.
ಅಲ್ಲದೇ, ಅದರಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳಪೆ ಗುಣಮಟ್ಟದ ಕಾಮಗಾರಿಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ ಹೇಗೆ ಸಾಧ್ಯವಾಗುತ್ತದೆ. ಆದುದರಿಂದ, ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಪೂರಕವಾಗುವಂತೆ ಸಮಿತಿಯು ತನ್ನ ವರದಿಯಲ್ಲಿ ನನ್ನ ಈ ಸಲಹೆಯನ್ನು ಉಲ್ಲೇಖಿಸಿಯೇ ಶಿಫಾರಸ್ಸುಗಳನ್ನು ಮಾಡಬೇಕೆಂದು ನಾನು ಹೇಳಿದ್ದೆ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು.
ಈ ಸಭೆಯಲ್ಲಿ ನಾನು ಅಧಿಕಾರಿಗಳನ್ನು ಉದ್ದೇಶಿಸಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿವಿಧ ಕಾಮಗಾರಿಗಳ ಗುಣಮಟ್ಟದ ಕುರಿತು ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಿ ಮಾಧ್ಯಮಗಳಲ್ಲಿ ಬಿಂಬಿಸಲಾಗಿದೆ. ಭ್ರಷ್ಟಾಚಾರದ ಪಿಡುಗು ಈ ಹಿಂದಿನ ಬಿಜೆಪಿ ಸರಕಾರದ ಬಹುದೊಡ್ಡ ಕೊಡುಗೆ ಎಂದು ಅವರು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸರಕಾರದ ಎಲ್ಲಾ ತೆರಿಗೆ ಸಂಗ್ರಹಣಾ ಇಲಾಖೆಗಳಲ್ಲಿರುವ (ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ಸಾರಿಗೆ ಇಲಾಖೆ, ಕಂದಾಯ ಇಲಾಖೆ) ಗ್ರೂಪ್ ‘ಬಿ' ಮತ್ತು ‘ಸಿ' ದರ್ಜೆಯ ಹುದ್ದೆಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ಮುಖಾಂತರ ಮಾಡಲಾಗುವುದೆಂದು ಈಗಾಗಲೇ 2025-26ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ ಘೋಷಿಸಿರುವುದು ಒಂದು ಐತಿಹಾಸಿಕ ನಿರ್ಧಾರವಾಗಿದ್ದು, ನಮ್ಮ ಸರಕಾರದ ಭ್ರಷ್ಟಾಚಾರ ವಿರೋಧಿ ನೀತಿಗೆ ಕನ್ನಡಿ ಹಿಡಿದಂತಿದೆ ಎಂದು ಬಸವರಾಜ ರಾಯರೆಡ್ಡಿ ಪ್ರತಿಪಾದಿಸಿದರು.
ಅಧಿಕಾರದಲ್ಲಿದ್ದಾಗ ಜನಸೇವೆಗೆ ಬದಲಾಗಿ ಭ್ರಷ್ಟಾಚಾರದಲ್ಲಿಯೇ ಮುಳುಗಿದ್ದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಅವರು ಹೇಳಿದರು.