ಬೆಂಗಳೂರಿನಲ್ಲಿ ಜೂನ್ ಅಂತ್ಯದವರೆಗೂ ಬೇಕಾದಷ್ಟು ನೀರಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಕುಡಿಯುವ ನೀರು ಸಂಬಂಧ ಜೂನ್ ಅಂತ್ಯದ ವರೆಗೂ ಸಾಕಾಗುವಷ್ಟು ನೀರನ್ನು ಸಂಗ್ರಹಿಸಿದ್ದೇವೆ. ಜತೆಗೆ ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ. ಬೇಕಾದಷ್ಟು ಹಣವನ್ನು ಸರಕಾರ ಮತ್ತು ಬಿಬಿಎಂಪಿ ಒದಗಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿ, ಕಬಿನಿಯಲ್ಲಿ ಕುಡಿಯುವ ನೀರಿಗೆ ಅಗತ್ಯ ಇರುವಷ್ಟು ನೀರನ್ನು ಸಂಗ್ರಹಿಸಿದ್ದೇವೆ. ಜೂನ್ ಅಂತ್ಯದವರೆಗೂ ಸಾಕಾಗುವಷ್ಟು ನೀರನ್ನು ಸಂಗ್ರಹವಾಗಿದೆ. ಜತೆಗೆ ಕೆಆರ್ ಎಸ್ನಲ್ಲಿ 11.02, ಕಬಿನಿಯಲ್ಲಿ 9.02 ಟಿಎಂಸಿ ನೀರು ಸಂಗ್ರಹವಿದೆ ಎಂದು ತಿಳಿಸಿದರು.
14000 ಸರಕಾರಿ ಕೊಳವೆ ಬಾವಿಗಳಲ್ಲಿ 6900 ಬತ್ತಿವೆ. ಹೀಗಾಗಿ ಸಮಸ್ಯೆ ಉಲ್ಬಣಗೊಂಡಿದೆ. ಬೆಂಗಳೂರಿನ 110 ಹಳ್ಳಿಗಳಲ್ಲಿ 55 ಹಳ್ಳಿಗಳಿಗೆ ಸಮಸ್ಯೆ ಆಗಿದೆ.ಆದರೆ, ಜೂನ್ ಅಂತ್ಯಕ್ಕೆ ಕಾವೇರಿ 5ನೆ ಹಂತದ ಕಾಮಗಾರಿ ಮುಕ್ತಾಯವಾಗಿ 775 ಎಂಎಲ್ಡಿ ಹೆಚ್ಚುವರಿ ನೀರು ಸಿಗಲಿದ್ದು, 110 ಹಳ್ಳಿಗಳಿಗೂ ಸರಬರಾಜು ಆಗಲಿದೆ. 313 ಸ್ಥಳಗಳಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಸುತ್ತಿದ್ದೇವೆ. 1200 ನಿಷ್ಟ್ರೀಯ ಕೊಳವೆಬಾವಿಗಳಿಗೆ ಮರುಜೀವ ನೀಡಲಾಗುವುದು ಎಂದು ಅವರು ಹೇಳಿದರು.
ಕೊಳೆಗೇರಿ, ಎತ್ತರದ ಪ್ರದೇಶದಲ್ಲಿ ಹಾಗೂ ಕೊಳವೆಬಾವಿ ಮೇಲೆ ಅವಲಂಬಿತ ಪ್ರದೇಶಗಳಲ್ಲಿ ಕೆಎಂಎಫ್ ಸೇರಿ ಎಲ್ಲಾ ಖಾಸಗಿ ಟ್ಯಾಂಕರ್ಗಳನ್ನು ಬಳಸಲು ಸೂಚಿಸಲಾಗಿದೆ. ಕಂಟ್ರೋಲ್ ರೂಮ್ಗಳ ಸಂಖ್ಯೆ ಹೆಚ್ವಿಸಿ ದೂರುಬಂದ ತಕ್ಷಣ ಆ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಸೂಚಿಸಲಾಗಿದೆ. ಟಾಸ್ಕ್ ಫೋರ್ಸ್ ಹೆಚ್ಚಿಸಲು ಹೇಳಲಾಗಿದೆ ಎಂದರು.
ಮುಖ್ಯವಾಗಿ ನಗರ ವ್ಯಾಪ್ತಿಯ ಪಾರ್ಕ್ಗಳಲ್ಲಿ ಕುಡಿಯುವ ನೀರು ಬಳಸದಂತೆ, ಶುದ್ದೀಕರಿಸಿದ ನೀರು ಬಳಸುವಂತೆ ಸೂಚಿಸಲಾಗಿದ್ದು, ಕೆ.ಸಿ.ವ್ಯಾಲಿ ರೀತಿ ಬೆಂಗಳೂರಿನ ಕೆರೆಗಳನ್ನೂ ಭರ್ತಿ ಮಾಡಬೇಕು. ಅದರಲ್ಲೂ ಬತ್ತಿ ಹೋಗಿರುವ ಪ್ರಮುಖ 14 ಕೆರೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಸೂಚನೆ ನೀಡಲಾಗಿದೆ. ಇದರಿಂದ ಅಂತರ್ಜಲ ಭರ್ತಿ ಆಗಿ ಕೊಳವೆಬಾವಿಗಳಿಗೆ ಮರುಜೀವ ಬರುತ್ತದೆ ಎಂದು ಹೇಳಿದರು.
ಪ್ರತಿ ದಿನ ಅಧಿಕಾರಿಗಳು ಸಭೆ ನಡೆಸಿ ವಾರಕ್ಕೊಮ್ಮೆ ಕ್ರಿಯಾಯೋಜನೆ ಸಿದ್ದಪಡಿಸುತ್ತಾರೆ. ಭವಿಷ್ಯದಲ್ಲಿ ಯಾವುದೇ ರೀತಿಯ ಸಂದರ್ಭದಲ್ಲೂ ನೀರಿನ ಕೊರತೆ ಆಗದಂತೆ ತಜ್ಞರ ಸಮಿತಿಯನ್ನು ರಚಿಸಲು ಕ್ರಮ ಕೈಗೊಳ್ಳಲಾಗಿದೆ. ಮತ್ತೊಂದೆಡೆ, 1700 ನೀರಿನ ಟ್ಯಾಂಕರ್ ನೋಂದಣಿ ಆಗಿವೆ. ಮಾಲ್ ಗಳು ಸೇರಿ ಖಾಸಗಿಯಾಗಿ ಇರುವ ಕೊಳವೆಬಾವಿಗಳಿಂದ ಟ್ಯಾಂಕರ್ ತುಂಬಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ಎಲ್ಲೂ ನೀರಿಗೆ ತೊಂದರೆ ಆಗದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.