ಗಾಝಾ ಮೇಲೆ ಇಸ್ರೇಲ್ ದಾಳಿ ಖಂಡಿಸಿ ಬೆಂಗಳೂರಿನಲ್ಲಿ ಮಾನವ ಸರಪಳಿ

Update: 2023-10-16 16:32 GMT

ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ಇಸ್ರೇಲ್ ದೇಶವು ಗಾಝಾ ಮೇಲೆ ನಡೆಸುತ್ತಿರುವ ದಾಳಿಯನ್ನು ಖಂಡಿಸಿ, ಸೋಮವಾರದಂದು ಬಹುತ್ವ ಕರ್ನಾಟಕದ ಸಾವಿರಾರು ಕಾರ್ಯಕರ್ತರು ನಗರದ ಎಂಜಿ ರಸ್ತೆಯಲ್ಲಿ ಬೃಹತ್ ಮಾನವ ಸರಪಳಿಯನ್ನು ನಿರ್ಮಿಸುವ ಮೂಲಕ ಮೌನ ಪ್ರತಿಭಟನೆ ನಡೆಸಿದರು.

ಗಾಝಾ ಮೇಲೆ ದಾಳಿ ನಡೆಸದಂತೆ ಭಾರತ ಸರಕಾರ ಇಸ್ರೇಲ್ ಮೇಲೆ ಒತ್ತಡ ತರಬೇಕು. ಫೆಲೆಸ್ತೀನ್ ಅನ್ನು ಪ್ರತ್ಯೇಕ ದೇಶವಾಗಿ ಗುರುತಿಸಿ ಅಲ್ಲಿನ ಜನರಿಗೆ ಮೂಲಭೂತ ಹಕ್ಕುಗಳು ನೀಡುವುದೇ ಸಮಸ್ಯೆಗೆ ಪರಿಹಾರವಾಗಿದೆ. ಗಾಝಾ ಪ್ರದೇಶದಿಂದ ಬರುತ್ತಿರುವ ಸುದ್ದಿಗಳು ಆತಂಕಕಾರಿಯಾಗಿದ್ದು, 2007ರಿಂದ ಅಕ್ರಮ ದಿಗ್ಬಂಧನವನ್ನು ಎದುರಿಸುತ್ತಿರುವ ಗಾಝಾ ನಿವಾಸಿಗಳು ಈ ವರ್ಷ ಅ.7ರಿಂದ ನಡೆಯುತ್ತಿರುವ ಸಮರದಿಂದ ನರಳಾಡುತಿದ್ದಾರೆಂದು ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು.

ವಿದೇಶಾಂಗ ಸಚಿವಾಲಯದ ವಕ್ತಾರರು ಇತ್ತೀಚೆಗೆ ಮಾಧ್ಯಮಗೊಂದಿಗೆ ಮಾತನಾಡಿದ್ದ ವೇಳೆ, ‘ಭಾರತವು ಯಾವಾಗಲೂ ಫೆಲೆಸ್ತೀನ್ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ರಾಜ್ಯವನ್ನು ಸ್ಥಾಪಿಸಲು ನೇರ ಮಾತುಕತೆಗಳ ಪುನರಾರಂಭವನ್ನು ಪ್ರತಿಪಾದಿಸುತ್ತದೆ ಹಾಗೂ ಇಸ್ರೇಲ್‌ನೊಂದಿಗೆ ಅಕ್ಕಪಕ್ಕದಲ್ಲಿ, ಶಾಂತಿಯಿಂದ ಸುರಕ್ಷಿತ ಮತ್ತು ಮಾನ್ಯತೆ ಪಡೆದ ಗಡಿಗಳಲ್ಲಿ ವಾಸಿಸುವ ಹಾಗೆ ಪ್ರತಿಪಾದಿಸುತ್ತದೆ’ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸ್ವಾಗತಾರ್ಹವಾಗಿದ್ದು, ಈ ಗುರಿ ತಲುಪುವಂತೆ ವಿಶ್ವಸಂಸ್ಥೆ ಮೇಲೆ ಒತ್ತಡ ಹಾಕಬೇಕು ಎಂದು ಅವರು ಆಗ್ರಹಿಸಿದರು.

ವಿಶ್ವ ಸಂಸ್ಥೆಯ ಪ್ರಕಾರ ಯುದ್ದದಲ್ಲಿ ಕನಿಷ್ಠ 600 ಮಕ್ಕಳು ಸೇರಿದಂತೆ 1,900ಕ್ಕೂ ಹೆಚ್ಚು ಫೆಲೆಸ್ತೀನ್ ನಿವಾಸಿಗಳು ಮೃತಪಟ್ಟಿದ್ದಾರೆ. 7,600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನು ಇಸ್ರೇಲಿ ದಾಳಿಯ ಪರಿಣಾಮವಾಗಿ 4,23,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಕಾರ್ಯಕರ್ತರು ತಿಳಿಸಿದರು.

ಗಾಝಾ ಮೇಲೆ ನಡೆಯುತ್ತಿರುವ ದಾಳಿಯನ್ನು ಜಗತ್ತಿನ ಎಲ್ಲ ದೇಶಗಳು ಖಂಡಿಸಬೇಕು. ಆದರೆ ಅದರ ಬದಲಿಗೆ ಜಗ್ಗತ್ತಿನಾದ್ಯಂತ ಇಸ್ರೇಲ್‌ಗೆ ನೆರವು ದೊರಕುತ್ತಿದೆ. ಇಸ್ರೇಲ್ ಮಾಡುತ್ತಿರುವ ಅನ್ಯಾಯದ ಬಗ್ಗೆ ಖಂಡನೆಯಾಗುತ್ತಿಲ್ಲ. ಜೊತೆಗೆ, ಫೆಲೆಸ್ತೀನ್ ಬಗ್ಗೆ ಸಾಕಷ್ಟು ಸುಳ್ಳು ಸುದ್ದಿಗಳು ಬೇರೆ ಹಬ್ಬುತ್ತಿವೆ. ಮಾಧ್ಯಮದ ವರದಿಯೊಂದರ ಪ್ರಕಾರ ಬಹಳಷ್ಟು ಸುಳ್ಳು ಸುದ್ದಿ ಭಾರತದಿಂದ ಹೋಗುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಭಾರತ ಸರಕಾರ ಗಾಝಾ ಮೇಲೆ ನಡೆಯುತ್ತಿರುವ ದಾಳಿ ನಿಲ್ಲುವಂತೆ ಒತ್ತಡ ತರಬೇಕು. ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಸಧ್ಯಕ್ಕೆ ನಡೆಯುತ್ತಿರುವ ಯುದ್ಧದ ಬಗ್ಗೆ ತನಿಖೆ ನಡೆಸಬೇಕು ಹಾಗೂ ವರದಿಯನ್ನು ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ವೇಳೆ ಬಹುತ್ವ ಕರ್ನಾಟಕದ ವಿನಯ್ ಶ್ರೀನಿವಾಸ್, ಮಧು ಭೂಷಣ್, ಮಮತಾ ಸಾಗರ್, ಕ್ಲಿಫ್ಟನ್ ರೊಜಾರಿಯೋ, ನಿಶಾ, ನರಸಿಂಹ ಮೂರ್ತಿ, ತೌಸೀಫ್ ಮಸೂದ್, ತನ್ವೀರ್ ಅಹ್ಮದ್, ಸೋಲಿಡಾರಿಟಿ ಯೂತ್ ಮೂಮೆಂಟ್‌ನ ಲಬೀದ್ ಶಾಫಿ, ದಾನಿಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಮೌನ ಪ್ರತಿಭಟನೆ ನಡೆಸಿದ್ದರೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದುದನ್ನು ಗಮನಿಸಿದ ಕಬ್ಬನ್ ಪಾರ್ಕ್‌ ಪೊಲೀಸ್ ಠಾಣೆಯ ಪೊಲೀಸರು ಮುಂಚೂಣಿಯಲ್ಲಿದ್ದ ಕೆಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆಯುವ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರೊಂದಿಗೆ ವಾಗ್ವಾದವೂ ನಡೆಯಿತು.

 

 

 




 





 


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News