ಸಚಿವ ಡಾ.ಮಹದೇವಪ್ಪಗೆ ಹೆಲಿಕಾಪ್ಟರ್ ಕೊಡಿಸಬೇಕು: ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ

ಎಚ್‌ಸಿ ಮಹದೇವಪ್ಪ/ಭಾಗೀರಥಿ ಮುರುಳ್ಯ
ಬೆಂಗಳೂರು : ರಾಜ್ಯದಲ್ಲಿ ದಲಿತ ಸಮುದಾಯದ ಕಾಲನಿ ಅಭಿವೃದ್ಧಿ ಕುರಿತು ಸಮೀಕ್ಷೆ ನಡೆಸಲು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಸರಕಾರ ಹೆಲಿಕಾಪ್ಟರ್ ಕೊಡಿಸಬೇಕು ಎಂದು ಬಿಜೆಪಿ ಸದಸ್ಯೆ ಭಾಗೀರಥಿ ಮುರುಳ್ಯ, ಸರಕಾರಕ್ಕೆ ವಿಶೇಷ ಬೇಡಿಕೆ ಇಟ್ಟಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಪ್ರಸ್ತುತ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಮಾತನಾಡಿದ ಅವರು, ಸುಳ್ಯ ತಾಲೂಕು ಸೇರಿದಂತೆ ರಾಜ್ಯದ ಬಹುತೇಕ ದಲಿತ ಸಮುದಾಯದ ಕಾಲನಿಗಳು ಅಭಿವೃದ್ಧಿ ಕಂಡಿಲ್ಲ. ಈ ಬಗ್ಗೆ ಸರಕಾರ ಸಮರ್ಪಕ ಸರ್ವೇ ನಡೆಸಬೇಕು. ಜೊತೆಗೆ, ಸಮೀಕ್ಷೆಗಾಗಿ ಮಹದೇವಪ್ಪ ಅವರಿಗೆ ಸರಕಾರವೇ ಹೆಲಿಕಾಪ್ಟರ್ ಕೊಡಿಸಬೇಕು ಎಂದರು.
ದಲಿತ ಸಮುದಾಯದ ಏಳಿಗೆಗೆ ರಾಜ್ಯ ಸರಕಾರ ಘೋಷಿಸುವ ಕಾರ್ಯಕ್ರಮಗಳ ಜೊತೆ ಜತೆಗೆ ಅನುದಾನವೂ ಹೆಚ್ಚಳ ಮಾಡಬೇಕು. ಅಂಬೇಡ್ಕರ್ ಭವನ ನಿರ್ಮಾಣದ ಅನುದಾನ ಎರಡು ಕೋಟಿಯಿಂದ 5 ಕೋಟಿ ರೂ.ಗೆ ಹೆಚ್ಚಿಸಬೇಕು. ಅದೇ ರೀತಿ, ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಲಾಗುವ ‘ಶಾದಿ’ ಅನುದಾನದ ಮಾದರಿಯಲ್ಲಿಯೇ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲ ವರ್ಗದ ಮಹಿಳೆಯರಿಗೂ ನೀಡಬೇಕು. ಈ ಪೈಕಿ ದಲಿತ ಸಮುದಾಯಕ್ಕೆ ಈ ಶಾದಿ ಯೋಜನೆ ಅಡಿ 1 ಲಕ್ಷ ರೂ. ಅನುದಾನ ನೀಡಬೇಕು ಎಂದು ಹೇಳಿದರು.
ಗ್ರಾಮ ಪಂಚಾಯತಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ವಿಕಲಚೇತನ ಸಿಬ್ಬಂದಿಯ ವೇತನ ಪರಿಷ್ಕರಿಸಿ ಹೆಚ್ಚಳ ಮಾಡಬೇಕು. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಭರವಸೆ ನೀಡಿದ್ದು, ಅದರಂತೆ ವೇತನ ಹೆಚ್ಚಿಸಿ ಅವರ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯ ಮಾಡಿದರು.