ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಬೈಕ್, ಆಟೋ ನಿಷೇಧ: ಮೊದಲ ದಿನವೇ 137 ಕೇಸ್, 68ಸಾವಿರ ರೂ. ದಂಡ ವಸೂಲಿ
ಬೆಂಗಳೂರು: ಮೈಸೂರು- ಬೆಂಗಳೂರು ನಡುವಿನ ಎಕ್ಸ್‌ಪ್ರೆಸ್ ಹೈವೇಯಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸಂಚಾರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿಷೇಧ ಹೇರಿದೆ. ಹೀಗಿದ್ದರೂ ಸಹ ನಿಯಮ ಉಲ್ಲಂಘಿಸಿದದವರ ವಿರುದ್ಧ 137 ಪ್ರಕರಣಗಳನ್ನು ರಾಮನಗರ ಪೊಲೀಸರು ದಾಖಲಿಸಿದ್ದಾರೆ.
ಮಂಗಳವಾರ ಬೆಳಗ್ಗೆ 8 ಗಂಟೆಯಿಂದಲೇ ಹೆದ್ದಾರಿಯ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಬೀಡು ಬಿಟ್ಟಿದ್ದ ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ನಿರ್ಬಂಧಿತ ವಾಹನಗಳು ಎಕ್ಸ್‌ಪ್ರೆಸ್ ವೇ ಪ್ರವೇಶಿಸದಂತೆ ನೋಡಿಕೊಂಡರು. ಸವಾರರಿಗೆ ಮಾಹಿತಿ ನೀಡಲು ಹೆದ್ದಾರಿಯ ಅಲ್ಲಲ್ಲಿ ಪ್ರವೇಶ ನಿರ್ಬಂಧ ಪೋಸ್ಟರ್ ಹಾಕಲಾಗಿತ್ತು.
ʼʼ137 ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ, ಒಟ್ಟು 68,500 ರೂಪಾಯಿ ದಂಡ ಸಂಗ್ರಹಿಸಿದ್ದೇವೆʼʼ ಎಂದು ರಾಮನಗರ ಪೊಲೀಸ್ ಅಧಿಕಾರಿಗಳು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಯಾವ ಯಾವ ವಾಹನ ನಿಷೇಧ?
ಮಲ್ಟಿ ಆಕ್ಸಿಸ್ ಕಂಟ್ರೋಲ್ ಇರುವಂತಹ ಎಕ್ಸ್‌ಪ್ರೆಸ್ ವೇನಲ್ಲಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ (ಆಟೋ ರಿಕ್ಷಾ ಸೇರಿ) ಹಾಗೂ ಟ್ರ್ಯಾಕ್ಟರ್‌ಗಳು, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ವಾಹನಗಳ ಸಂಚಾರವನ್ನು ನಿರ್ಬಂಧಿಸಲು ನಿರ್ಧರಿಸಲಾಗಿದೆ.