ಬಿಟ್ ಕಾಯಿನ್-ಡಾರ್ಕ್ ನೆಟ್ ಪ್ರಕರಣ: ಮನೀಷ್ ಖರ್ಬಿಕರ್ ನೇತೃತ್ವದಲ್ಲಿ ಎಸ್‍ಐಟಿ ರಚಿಸಿ ಸರಕಾರ ಆದೇಶ
ಬೆಂಗಳೂರು, ಜು.4: ಬೆಂಗಳೂರು ನಗರದ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ 2020ರಲ್ಲಿ ದಾಖಲಾಗಿರುವ ಬಿಟ್ ಕಾಯಿನ್-ಡಾರ್ಕ್‍ನೆಟ್ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಸ್ತೃತ ತನಿಖೆಗಾಗಿ ಸಿಐಡಿ ವಿಭಾಗದ(ಆರ್ಥಿಕ ಅಪರಾಧಗಳು) ಎಡಿಜಿಪಿ ಮನೀಷ್ ಖರ್ಬಿಕರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್‍ಐಟಿ)ಯನ್ನು ರಚಿಸಿ ಸರಕಾರ ಆದೇಶ ಹೊರಡಿಸಿದೆ.
ಎಸ್‍ಐಟಿಯಲ್ಲಿ ಸಿಐಡಿ ವಿಭಾಗದ ಡಿಐಜಿ(ಆರ್ಥಿಕ ಅಪರಾಧಗಳು) ಡಾ.ಕೆ.ವಂಶಿ ಕೃಷ್ಣ, ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ, ಸಿಐಡಿ ಅಧೀಕ್ಷಕ ಶರತ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಪ್ರಕರಣದೊಂದಿಗೆ ರಾಜ್ಯದಲ್ಲಿ ದಾಖಲಾಗಿರುವ ಈ ಮಾದರಿಯ ಇತರ ಪ್ರಕರಣಗಳನ್ನೂ ಈ ವಿಶೇಷ ತನಿಖಾ ತಂಡ ಪರಿಶೀಲಿಸಲಿದೆ.
ಸಿಐಡಿ ವಿಭಾಗದ ಪೊಲೀಸ್ ಮಹಾನಿರ್ದೇಶಕರ ಸಾಮಾನ್ಯ ನಿಯಂತ್ರಣ ಮತ್ತು ಮೇಲ್ವಿಚಾರಣೆಯಲ್ಲಿ ಈ ವಿಶೇಷ ತನಿಖಾ ತಂಡ ಕಾರ್ಯ ನಿರ್ವಹಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಪ್ರಕರಣದ ತನಿಖೆಯಲ್ಲಿ ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಜಾಲಗಳು ಭಾಗಿಯಾಗಿರುವ ಸಾಧ್ಯತೆಗಳಿದ್ದು, ಕೃತ್ಯದ ಆರೋಪಿಗಳು ಸೈಬರ್ ವಿಷಯಗಳ ಪರಿಣಿತರಾಗಿದ್ದು, ಬಿಟ್ ಕಾಯಿನ್ ಮತ್ತು ಡಾರ್ಕ್‍ನೆಟ್‍ಗಳಲ್ಲಿ ವ್ಯವಹಾರ ಮಾಡಿರುವ ಮಾಹಿತಿಗಳಿವೆ. ಆದುದರಿಂದ, ಈ ಎಲ್ಲ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಲು ಮತ್ತು ಹೆಚ್ಚಿನ ವಿಸ್ತøತ ತನಿಖೆಯ ಅವಶ್ಯಕತೆ ಇದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಜೂ.24ರಂದು ಸಲ್ಲಿಸಿದ ಪ್ರಸ್ತಾವನೆಯನ್ವಯ ಸರಕಾರ ಎಸ್‍ಐಟಿ ರಚಿಸಿ ಆದೇಶ ಹೊರಡಿಸಿದೆ.