ಬಿಜೆಪಿಗೆ ಪ್ರಜಾತಂತ್ರ, ಸಂವಿಧಾನದ ಮೇಲೆ ನಂಬಿಕೆ ಇಲ್ಲ, ಅವರಿಗೆ ಸರ್ವಾಧಿಕಾರದಲ್ಲಿ ಮಾತ್ರ ನಂಬಿಕೆ: ಸಿಎಂ ಸಿದ್ದರಾಮಯ್ಯ

Update: 2024-03-22 12:14 GMT

ಬೆಂಗಳೂರು : ಸೋಲಿನ ಭಯದಲ್ಲಿ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಬಿಜೆಪಿ ಸ್ಥಗಿತಗೊಳಿಸಿದೆ. ಈ ಬಾರಿ ಬಿಜೆಪಿಯನ್ನು ದೇಶದ ಜನ ಸ್ಪಷ್ಟವಾಗಿ ತಿರಸ್ಕರಿಸಿ ಭಾರತವನ್ನು ಉಳಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಬ್ರಿಟಿಷರನ್ನು ಭಾರತದಿಂದ ಓಡಿಸಲು ಸುದೀರ್ಘ ಹೋರಾಟ ನಡೆಸಿ ಹುತಾತ್ಮರಾದ, ಜೈಲು ಸೇರಿದ ಚರಿತ್ರೆ ಇರುವ ಪಕ್ಷ ಕಾಂಗ್ರೆಸ್. ಬಿಜೆಪಿ ನಮಗೆ ಎಷ್ಟೇ ತೊಂದರೆ ಕೊಟ್ಟರೂ ಕಾಂಗ್ರೆಸ್ ಕಾರ್ಯಕರ್ತರು ಹೋರಾಟದ ಹಾದಿಯಲ್ಲೇ ಎಲ್ಲವನ್ನೂ ಎದುರಿಸಲಿದ್ದಾರೆ" ಎಂದರು.

"ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯ ಅಂತಿಮ.‌ ಕಾಂಗ್ರೆಸ್ ಜನರಿಂದ ಹಣ ಸಂಗ್ರಹಿಸಿದೆ. ಜನರು ಸ್ವಯಂಪ್ರೇರಿತರಾಗಿ ಕೊಟ್ಟ ಹಣ ಕಾಂಗ್ರೆಸ್ ಖಾತೆಯಲ್ಲಿತ್ತು. ಸಣ್ಣ ತಾಂತ್ರಿಕ ಕಾರಣ ನೀಡಿ ಇಡೀ ಖಾತೆಯನ್ನು ಸ್ಥಗಿತಗೊಳಿಸಿರುವುದು ಸರ್ವಾಧಿಕಾರಿ ಧೋರಣೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನುಸ್ಮೃತಿಯ ಮಾರಕ‌ ಮನಸ್ಥಿತಿ

ಬಿಜೆಪಿ ಮನುಸ್ಮೃತಿಯ ಮಾರಕ ಮನಸ್ಥಿತಿಯನ್ನು ಹೊಂದಿದೆ. ಹೀಗಾಗಿ ಬಿಜೆಪಿಗೆ ಅಸಮಾನತೆ ಇರಬೇಕು, ಜಾತಿ ವ್ಯವಸ್ಥೆ ಗಟ್ಟಿಯಾಗಬೇಕು. ನಿರುದ್ಯೋಗ ಹೆಚ್ಚಾಗಬೇಕು, ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಬಾರದು. ಈ ಸಮಸ್ಯೆಗಳ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಬಾರದು ಎನ್ನುವ ಮನಸ್ಥಿತಿ ಬಿಜೆಪಿಯದ್ದಾಗಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಹಣ ಇಲ್ಲದಂತೆ ಮಾಡಲು ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದೆ ಎಂದರು. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News