ಮಂಡ್ಯದಲ್ಲಿ ಬೆಂಕಿ ಹತ್ತಿಸಿ ರಾಜಕೀಯದ ಚಳಿ ಕಾಯಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರು: ಸಚಿವ ಪ್ರಿಯಾಂಕ್‌ ಖರ್ಗೆ

Update: 2024-01-29 13:22 GMT

ಬೆಂಗಳೂರು:  ಮಂಡ್ಯದಲ್ಲಿ ಬೆಂಕಿ ಹತ್ತಿಸಿ ಆ ಬೆಂಕಿಯಲ್ಲಿ ರಾಜಕೀಯದ ಚಳಿ ಕಾಯಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರು ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕೆರೆಗೋಡು ಧ್ವಜ ವಿವಾದ ಸಂಬಂಧ ʼಎಕ್ಸ್‌ʼ ಪ್ರತಿಕ್ರಿಯಿಸಿದ ಅವರು, ʼಇಷ್ಟು ದಿನ ಕರಾವಳಿಯನ್ನು ಕೋಮು ರಾಜಕಾರಣದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದ ಬಿಜೆಪಿ, ಸಂಘ ಪರಿವಾರ ಈಗ ಮಂಡ್ಯದಲ್ಲಿ ತಮ್ಮ ಪ್ರಯೋಗ ಆರಂಭಿಸಿದೆ.ಸಮಾಜ ಶಾಂತಿಯುತವಾಗಿದ್ದರೆ ಬಿಜೆಪಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲʼ  ಎಂದು ದೂರಿದ್ದಾರೆ.

ವಿರೋಧ ಪಕ್ಷದ ನಾಯಕನೆಂದರೆ ಘನತೆಯುಕ್ತ ಸ್ಥಾನ, ಆ ಸ್ಥಾನದ ಗೌರವವನ್ನು ಮಣ್ಣುಪಾಲು ಮಾಡುತ್ತಿರುವ ಆರ್‌. ಅಶೋಕ್  ಹಾಗೂ ವಿಜಯೇಂದ್ರ ಅವರೇ ನಿಮ್ಮ ಗಮನಕ್ಕೆ ಕೆಲವು ವಿಚಾರಗಳು ಇಲ್ಲಿದೆ ಎಂದು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

► 29/12/2023 ರಂದು ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜವನ್ನು ಮಾತ್ರ ಹಾರಿಸುತ್ತೇವೆ ಎಂದು ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ನವರು ಧ್ವಜ ಸ್ಥಂಭಕ್ಕೆ ಅನುಮತಿ ಕೇಳಿದ್ದಾರೆ.

► 17/01/2024ರಂದು ಧ್ವಜ ಸ್ಥಂಭದಲ್ಲಿ ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜವನ್ನು ಬಿಟ್ಟು ಇನ್ನಿತರ ಯಾವುದೇ ರಾಜಕೀಯ, ಧಾರ್ಮಿಕ ಧ್ವಜವವನ್ನು ಹಾರಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು ಸಹಿ ಮಾಡಿದ್ದಾರೆ.

► 18/01/2024ರಂದು ಕೆರೆಗೋಡು ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜಾರೋಹಣಕ್ಕೆ ಮಾತ್ರ ಶರತ್ತುಗಳೊಂದಿಗೆ ಅನುಮತಿ ಪತ್ರ ನೀಡಿದ್ದಾರೆ.

► ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾಡುವ ಮಾರ್ಪಾಡುಗಳಿಗೆ ಬದ್ಧರಾಗಿರಬೇಕೆಂದು ತಿಳಿಸಲಾಗಿದೆ.

► ಯಾವುದೇ ಗಲಭೆಗಳಿಗೆ ಅವಕಾಶ ಮಾಡಿಕೊಡದಂತೆ ಷರತ್ತು ವಿಧಿಸಲಾಗಿದೆ.

► ಧ್ವಜಾರೋಹಣ ಮಾಡುವ 6,7 ದಿನ ಮುಂಚಿತವಾಗಿ ಗ್ರಾಮ ಪಂಚಾಯ್ತಿ ಹಾಗೂ ಪೊಲೀಸರಿಗೆ ತಿಳಿಸುವಂತೆ ಸೂಚಿಸಲಾಗಿದೆ.

ಇನ್ನೂ ಬಿಜೆಪಿ ನಾಯಕರು ಪ್ರಶ್ನೆಗಳಿಗೆ ಉತ್ತರಿಸಲೇಬೇಕು ಎಂದು ಸಚಿವರು ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

1. ರಾಷ್ಟ್ರ ಧ್ವಜದ ಬದಲು ಏಕಾಏಕಿ ಭಾಗವಾಧ್ವಜ ಹಾರಿಸುವ ಷಡ್ಯಂತ್ರ ರೂಪಿಸಿದ್ದು ಯಾರು?

2. ಅನುಮತಿ ಪತ್ರದ ಷರತ್ತುಗಳನ್ನು ಉಲ್ಲಂಘಿಸಲು ಪ್ರೇರೇಪಿಸಿದ್ದು ಯಾರು?

3. ಬಿಜೆಪಿ ಅದೆಷ್ಟು ದಿನಗಳಿಂದ ಶಾಂತಿ ಕೆಡಿಸುವ ಸಂಚು ರೂಪಿಸಿತ್ತು?

4. ಕಾನೂನು, ನೀತಿ ನಿಯಮಗಳೇನು ಬಿಜೆಪಿ ಕಾಲ ಕೆಳಗಿನ ಕಸದಂತೆ ನೋಡುವುದೇಕೆ?

5. ತ್ರಿವರ್ಣ ಧ್ವಜವನ್ನು ವಿರೋಧಿಸಿದ್ದ ಆರೆಸ್ಸೆಸ್ ಹೇಳಿಕೊಟ್ಟ ಪಾಠದಂತೆ ಬಿಜೆಪಿಯೂ ತಿರಂಗಾ ಕಂಡರೆ ಉರಿದು ಬೀಳುತ್ತಿದೆ, ರಾಷ್ಟ್ರ ಧ್ವಜಕ್ಕೆ ಕೈ ಮುಗಿಯುವ ಬದಲು ಕೆಂಡ ಕಾರುತ್ತಿದೆ.

‌6. ವಿಜಯೇಂದ್ರ, ಅಶೋಕ್‌ ಅವರೇ, ಸರ್ಕಾರ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ಆ ಧ್ವಜ ಸ್ಥಂಭದ ಉದ್ದೇಶವನ್ನು ಈಡೇರಿಸಿದೆ, ಹೀಗಿದ್ದೂ ನಿಮಗೆ ಇಷ್ಟೊಂದು ಉರಿ, ತಾಪವೇಕೆ? ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

" ರಾಷ್ಟ್ರ ಧ್ವಜವನ್ನು ದ್ವೇಷಿಸುವ ಮೂಲಕ ಬಿಜೆಪಿಗರು ತಮಗೆ ತಾವೇ ದೇಶದ್ರೋಹಿಗಳು ಎಂದು ಸರ್ಟಿಫಿಕೇಟ್ ಕೊಟ್ಟುಕೊಂಡಿದ್ದಾರೆ. ಬಿಜೆಪಿಗರಿಗೆ ದೇಶದ ಧ್ವಜ, ದೇಶದ ಸಂವಿಧಾನ, ದೇಶದ ಐಕ್ಯತೆ ಇಷ್ಟವಿಲ್ಲವೆಂದರೆ ಅವರ ಪ್ರೀತಿಪಾತ್ರವಾದ ಪಾಕಿಸ್ತಾನಕ್ಕೆ ಹೋಗಲಿ. ಬಿಜೆಪಿಯ ಯಾವುದೇ ತಂತ್ರ, ಕುತಂತ್ರಗಳಿಗೆ ನಾವು ಬಗ್ಗುವುದಿಲ್ಲ, ಬಗ್ಗುಬಡಿಯುತ್ತೇವೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News