ವಕ್ಫ್ ಆಸ್ತಿ ತೆರವುಗೊಳಿಸುತ್ತೇವೆ, ಕಾಯಿದೆ ಬಲಪಡಿಸುತ್ತೇವೆ ಎಂದು 2014ರಲ್ಲೇ ಭರವಸೆ ನೀಡಿದ್ದ ಬಿಜೆಪಿ!
ಬೆಂಗಳೂರು: ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸುವುದಾಗಿ ಈ ಹಿಂದೆ ಬಿಜೆಪಿ ನೀಡಿದ್ದ ಆಶ್ವಾಸನೆಗಳು ಇದೀಗ ಬೆಳಕಿಗೆ ಬಂದಿದೆ. ಆಸ್ತಿ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಕ್ಫ್ ಮಂಡಳಿ ನೋಟಿಸ್ ನೀಡಿದ ವಿಚಾರವಾಗಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿರುವಂತೆಯೇ, ಬಿಜೆಪಿಯ ಹಳೆಯ ಪ್ರಣಾಳಿಕೆ ಮುನ್ನಲೆಗೆ ಬಂದಿದೆ.
2014 ರ ಚುನಾವಣಾ ಸಂದರ್ಭದಲ್ಲಿ ಬಿಜೆಪಿ 52 ಪುಟಗಳ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿತ್ತು. ಅದರ 17 ನೇ ಪುಟದಲ್ಲಿ ವಕ್ಫ್ ಕಾಯಿದೆಗಳನ್ನು ಬಲಪಡಿಸುವ ಬಗ್ಗೆ ಹಾಗೂ ವಕ್ಫ್ ಆಸ್ತಿ ತೆರವುಗೊಳಿಸುವ ಬಗ್ಗೆ ಬಿಜೆಪಿ ಆಶ್ವಾಸನೆ ನೀಡಿತ್ತು. ಇದೀಗ, ವಕ್ಫ್ ಆಸ್ತಿ ತೆರವಿಗೆ ಸಂಬಂಧಿಸಿದಂತೆ ರಾಜಕೀಯ ಶುರು ಮಾಡಿರುವ ಬಿಜೆಪಿಗೆ ತನ್ನ ಹಳೆಯ ಪ್ರಣಾಳಿಕೆ ಮುಳ್ಳಾಗಿ ಪರಿಣಮಿಸಿದೆ.
ಈ ಹಿಂದೆ, ತಾನು ಆಶ್ವಾಸನೆ ನೀಡಿದ ವಿಷಯವನ್ನೇ ಕಾಂಗ್ರೆಸ್ ಸರ್ಕಾರ ಮಾಡಲು ಮುಂದಾದಾಗ ಬಿಜೆಪಿ ರಾಜಕೀಯ ಮಾಡಲು ಆರಂಭಿಸಿದೆ ಎಂಬ ಆಕ್ಷೇಪಗಳು ವ್ಯಕ್ತವಾಗಿದೆ.
ವಕ್ಫ್ ಮಂಡಳಿಯ ಒತ್ತುವರಿ ಜಮೀನಿಗೆ ನೋಟಿಸ್ ನೀಡಿರುವುದನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಂಡಿದ್ದು, ರೈತರ ಜಮೀನನ್ನು ವಕ್ಫ್ ಮಂಡಳಿ ವಶಪಡಿಸಿಕೊಳ್ಳಲು ಹೊರಟಿದೆ ಎಂದು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಆರಂಭಿಸಿದೆ.
ವಕ್ಫ್ ಒತ್ತುವರಿ ಆಸ್ತಿಯನ್ನು ತೆರವುಗೊಳಿಸುವುದಾಗಿ ಇತ್ತೀಚೆಗೆ ಸಚಿವ ಝಮೀರ್ ಅಹ್ಮದ್ ಅವರು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಕೆಲವು ಜಿಲ್ಲೆಗಳಲ್ಲಿ ವಕ್ಫ್ ಜಮೀನು ಒತ್ತುವರಿ ಮಾಡಲಾಗಿದೆ ಎಂದು ನೋಟಿಸ್ ನೀಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ತಲೆತಲಾಂತರದಿಂದ ಕೃಷಿ ಮಾಡಿಕೊಂಡು ಬರುತ್ತಿರುವ ರೈತರಿಗೂ ನೋಟಿಸ್ ಬಂದಿದೆ ಎಂದು ಹೇಳಲಾಗಿದೆ.
ಇದೇ ವಿಚಾರ ಮುಂದಿಟ್ಟು ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಝಮೀರ್ ಅಹ್ಮದ್ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿತ್ತು. ಸಿಟಿ ರವಿ, ಬಸನಗೌಡ ಯತ್ನಾಳ್ ಸೇರಿದಂತೆ ಹಲವು ಬಿಜೆಪಿ ನಾಯಕರು ʼಲ್ಯಾಂಡ್ ಜಿಹಾದ್ʼ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆಯನ್ನೂ ಆರಂಭಿಸಿದ್ದರು. ವಕ್ಫ್ ಆಸ್ತಿಯ ಬಗ್ಗೆ ಬಿಜೆಪಿ ರಾಜಕಾರಣ ತಾರಕಕ್ಕೇರುತ್ತಿದ್ದಂತೆಯೇ ಹತ್ತು ವರ್ಷಗಳ ಹಿಂದಿನ ಬಿಜೆಪಿ ಪ್ರಣಾಳಿಕೆ ಮತ್ತೆ ಮುನ್ನಲೆಗೆ ಬಂದಿದ್ದು, ಕೇಸರಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.