ಸದನದಲ್ಲಿ ಮರಾಠಿ ಮಾತನಾಡಿದ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ್: ಕಾಂಗ್ರೆಸ್ ಸದಸ್ಯರ ಆಕ್ಷೇಪ

Update: 2023-12-15 10:55 GMT

ಬೆಳಗಾವಿ: ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ ಖಾನಾಪುರ ಕ್ಷೇತ್ರದ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ್ ಮರಾಠಿ ಭಾಷೆಯಲ್ಲಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಸದಸ್ಯ ಲಕ್ಷ್ಮಣ ಸವದಿ ಸೇರಿದಂತೆ ಇನ್ನಿತರರು ಆಕ್ಷೇಪ ವ್ಯಕ್ತಪಡಿಸಿದರು.

ಶುಕ್ರವಾರ ವಿಧಾನಸಭೆಯಲ್ಲಿ ಮಾತನಾಡಿದ ವಿಠ್ಠಲ ಹಲಗೇಕರ್, ಖಾನಾಪುರ ತಾಲೂಕಿನಲ್ಲಿರುವ ಅಂಗನವಾಡಿಗಳಿಗೆ ಮರಾಠಿ ಭಾಷಿಕ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಮರಾಠಿಯಲ್ಲಿ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಲಕ್ಷ್ಮಣ ಸವದಿ, ‘ಯಾವ ಭಾಷೆಯ ಕುರಿತು ಇಲ್ಲಿ ಗಲಾಟೆಗಳು ನಡೆಯುತ್ತಿವೆಯೋ, ನೀವು ಅದೇ ಭಾಷೆಯನ್ನು ವಿಧಾನಸಭೆಯಲ್ಲಿ ಬಳಸಲು ಅವಕಾಶ ನೀಡಬೇಡಿ’ ಎಂದರು.

‘ಅವರಿಗೆ ಕನ್ನಡ ಚೆನ್ನಾಗಿ ಬರುತ್ತದೆ. ನಮ್ಮ ಬಳಿ ಕನ್ನಡದಲ್ಲೆ ಅವರು ಮಾತನಾಡುತ್ತಾರೆ. ಕನ್ನಡ ಮಾತನಾಡಲು ಸಾಧ್ಯವಾಗದಿದ್ದರೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಲಿ ಎಂದು ಲಕ್ಷ್ಮಣ ಸವದಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಠ್ಠಲ ಹಲಗೇಕರ್, ಸವದಿಯವರು ಹೊರಗೆ ಮರಾಠಿ ಮಾತನಾಡುತ್ತಾರೆ. ಈಗ ಯಾಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಗೊತ್ತಿಲ್ಲ’ ಎಂದು ಹೇಳಿದರು.

ಖಾನಾಪುರ ತಾಲೂಕಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕು. ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ರಸ್ತೆಗಳ ಅಭಿವೃದ್ಧಿ ಮಾಡಬೇಕು. ಭೀಮಗಡ ಅಭಯಾರಣ್ಯದ ವ್ಯಾಪ್ತಿಯಲ್ಲಿರುವ ಗ್ರಾಮಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಅವರು ಹೇಳಿದರು.

‘ಒಂದು ಭಾಷೆ ಬೆಳೆದರೆ ಕನ್ನಡ ಭಾಷೆಯು ಬೆಳೆಯುತ್ತದೆ. ಜನವರಿಯಲ್ಲಿ ನಡೆಯಲಿರುವ ಮುಂದಿನ ಅಧಿವೇಶನದ ವೇಳೆಗೆ ನೀವು(ವಿಠ್ಠಲ ಹಲಗೇಕರ್) ಸ್ಪಷ್ಟವಾಗಿ ಕನ್ನಡ ಭಾಷೆಯನ್ನು ಕಲಿತುಕೊಂಡು, ವಿಧಾನಸಭೆಯಲ್ಲಿ ಕನ್ನಡದಲ್ಲೇ ಮಾತನಾಡಬೇಕು’ ಎಂದು ಸ್ಪೀಕರ್ ಯು.ಟಿ.ಖಾದರ್ ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News