ರಾಜ್ಯ ಸರಕಾರದ ವಜಾಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಬಿಜೆಪಿ ನಿಯೋಗದಿಂದ ಮನವಿ

Update: 2024-10-14 13:41 GMT

ಬೆಂಗಳೂರು : ಹುಬ್ಬಳ್ಳಿ ಗಲಭೆ ಪ್ರಕರಣ ಸಂಬಂಧದ ಕೇಸ್‍ಗಳನ್ನು ಹಿಂಪಡೆದ ಕ್ರಮವನ್ನು ಖಂಡಿಸಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು, ರಾಜ್ಯ ಸರಕಾರ ವಜಾಗೊಳಿಸಬೇಕೆಂದು ಆಗ್ರಹಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸೋಮವಾರ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದ ದೇಶದ್ರೋಹಿಗಳ ಮೇಲಿನ ಕೇಸುಗಳನ್ನು ಹಿಂಪಡೆದಿದೆ ಎಂದು ದೂರಿದರು.

ಹುಬ್ಬಳ್ಳಿಯಲ್ಲಿ ಹೋರಾಟ: ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ, ಕಲ್ಲೆಸೆದ ದೇಶದ್ರೋಹಿಗಳನ್ನು ಬೆಂಬಲಿಸುವ ಹಾಗೂ ಅವರ ಮೊಕದ್ದಮೆ ರದ್ದುಪಡಿಸುವ ಸರಕಾರದ ನಿರ್ಧಾರದ ವಿರುದ್ಧ ಹೋರಾಟ ನಿಲ್ಲುವುದಿಲ್ಲ. ಹುಬ್ಬಳ್ಳಿಯಲ್ಲಿ ಶೀಘ್ರವೇ ದೊಡ್ಡ ಹೋರಾಟ ಮಾಡಲಿದ್ದೇವೆ. ಕೇಸು ರದ್ದತಿ ಸರಿಯಲ್ಲ ಎಂಬ ಕುರಿತು ಸರಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ರಾಜ್ಯಪಾಲರ ಭೇಟಿಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರವು ಬಿಜೆಪಿ ಶಾಸಕರಿಗೆ ಎಷ್ಟು ಅನುದಾನ ನೀಡಿದೆ? ಕಾಂಗ್ರೆಸ್ ಶಾಸಕರಿಗೆ ಎಷ್ಟು ಅನುದಾನ ಕೊಟ್ಟಿದೆ ಎಂಬುದನ್ನು ಮೊದಲು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

‘ಕೇಂದ್ರದಿಂದ ರಾಜ್ಯಕ್ಕೆ ಕಡಿಮೆ ಅನುದಾನ ಕುರಿತಂತೆ ಮಾತನಾಡುವ ಕಾಂಗ್ರೆಸ್ ಮುಖಂಡರು ತಮ್ಮ ಮನೆಯಲ್ಲಿ ಸತ್ತುಬಿದ್ದ ಹೆಗ್ಗಣವನ್ನು ಮೊದಲು ಆಚೆ ಬಿಸಾಡಲಿ, ಆಮೇಲೆ ಬೇರೆಯವರ ತಟ್ಟೆಯಲ್ಲಿ ಬಿದ್ದ ನೊಣವನ್ನು ಎತ್ತಿ ಆಚೆ ಹಾಕಬಹುದು ಎಂದು ಅಶೋಕ್ ತಿಳಿಸಿದರು.

ಸರಕಾರದ ಯೂ ಟರ್ನ್: ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಈ ಸರಕಾರ ವಜಾ ಮಾಡಬೇಕೆಂದು ರಾಜ್ಯಪಾಲರನ್ನು ಒತ್ತಾಯಿಸಿದ್ದೇವೆ. ದೇಶದ್ರೋಹಿಗಳ ವಿರುದ್ಧ ನಮ್ಮ ಸರಕಾರ ಕೇಸುಗಳನ್ನು ಹಾಕಿತ್ತು. ಆದರೆ, ಕೋರ್ಟಿನಲ್ಲಿ ಕೇಸು, ಎನ್‍ಐಎ ತನಿಖೆ ನಡೆಯುತ್ತಿರುವಾಗ ಪ್ರಕರಣ ರದ್ದತಿ ಕುರಿತು ಸಂಪುಟ ತೀರ್ಮಾನಿಸದೆ. ಪ್ರತಿಭಟನೆಗಳು ಹೆಚ್ಚಾದ ಬಳಿಕ ನಿನ್ನೆ ಕೋರ್ಟ್ ಒಪ್ಪಿದರೆ ಮಾತ್ರ ಕೇಸು ಹಿಂಪಡೆಯಲಾಗುವುದು ಎಂದು ಯೂ ಟರ್ನ್ ಹೊಡೆದಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಸರಕಾರದ ನಿರ್ಧಾರದ ವಿರುದ್ಧ ಕೋರ್ಟಿನಲ್ಲಿ ಮಾತ್ರವಲ್ಲದೆ, ಜನತಾ ನ್ಯಾಯಾಲಯದಲ್ಲೂ ಬಿಜೆಪಿ ಹೋರಾಟ ಮಾಡಲಿದೆ. ಹಿಜಾಬ್ ವಿರುದ್ಧ ಹೋರಾಟ ಮಾಡಿದವರ ಕೇಸ್ ವಾಪಸ್ ಪಡೆದಿಲ್ಲ. ಆದರೆ, ಹಿಜಾಬ್ ಪರವಾಗಿ ಹೋರಾಟ ಮಾಡಿದವರ ಕೇಸ್ ಹಿಂಪಡೆಯುತ್ತಾರೆ. ವಿದ್ಯಾರ್ಥಿಗಳಲ್ಲೂ ಭೇದಭಾವ ಮಾಡಿದ್ದಾರೆಂದು ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ಷೇಪ ವ್ಯಕ್ತಪಡಿಸಿದರು.

ನಿಯೋಗದಲ್ಲಿ ಶಾಸಕರಾದ ಡಾ.ಅಶ್ವತ್ಥನಾರಾಯಣ್, ಎಸ್.ಆರ್.ವಿಶ್ವನಾಥ್, ಸಿ.ಕೆ.ರಾಮಮೂರ್ತಿ, ಎನ್.ರವಿಕುಮಾರ್, ಮಹಂತೇಶ್ ಕವಟಗಿಮಠ ಮೊದಲಾದವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News