ದೇಶ ಶೋಕದಲ್ಲಿರುವಾಗ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಮುಂದುವರೆದಿರುವುದು ಏಕೆ? : ಬಿ.ಕೆ.ಹರಿಪ್ರಸಾದ್
ಬಿ.ಕೆ.ಹರಿಪ್ರಸಾದ್
ಬೆಂಗಳೂರು : ಜಮ್ಮು ಕಾಶ್ಮೀರದ ಪಹಲ್ಗಾಮ್‍ನಲ್ಲಿ ಉಗ್ರರ ದಾಳಿಯಿಂದಾಗಿ 26 ಮಂದಿ ಪ್ರಾಣ ಕಳೆದುಕೊಂಡ ಘಟನೆಯಿಂದಾಗಿ ಇಡೀ ದೇಶ ಶೋಕದಲ್ಲಿರುವಾಗ, ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಮುಂದುವರೆಯಲು ಅವಕಾಶ ಕೊಟ್ಟಿರುವುದು ಏಕೆ? ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್‍ನಲ್ಲಿ ನಡೆದ ಉಗ್ರರ ದಾಳಿಯ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿದೆ. ಈ ಸಂಬಂಧ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕೇಂದ್ರ ಸರಕಾರ ಕರೆದಿದ್ದ ಸರ್ವ ಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಬಂದಿಲ್ಲ. ಉಗ್ರರ ದಾಳಿ ಕುರಿತು ಚರ್ಚೆ ನಡೆಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಈಗಾಗಲೇ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ಹರಿಪ್ರಸಾದ್ ತಿಳಿಸಿದರು.
ರಾಜಿನಾಮೆ ಬಗ್ಗೆ ಅಮಿತ್ ಶಾ ನಿರ್ಧಾರ ಮಾಡಬೇಕು: ಪಹಲ್ಗಾಮ್‍ನಲ್ಲಿ ಭದ್ರತಾ ವೈಫಲ್ಯವನ್ನು ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಈ ಹಿಂದೆ ಮುಂಬೈನಲ್ಲಿ ಉಗ್ರರ ದಾಳಿ ನಡೆದಾಗ ಕೇಂದ್ರ ಗೃಹ ಸಚಿವರಾಗಿದ್ದ ಶಿವರಾಜ್ ಪಾಟೀಲ್ ರಾಜಿನಾಮೆ ನೀಡಿದ್ದರು. ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜಿನಾಮೆ ಕೇಳುವುದಿಲ್ಲ. ಈ ವಿಚಾರದಲ್ಲಿ ಅವರೇ ನಿರ್ಧಾರ ಮಾಡಬೇಕು ಎಂದು ಹರಿಪ್ರಸಾದ್ ಹೇಳಿದರು.
ಪಹಲ್ಗಾಮ್ ಘಟನೆಯ ಬಳಿಕ ನಮ್ಮ ಗಡಿ ಭದ್ರತಾ ಪಡೆಯ ಸೈನಿಕರೊಬ್ಬರು ಪಾಕಿಸ್ತಾನದ ಗಡಿ ದಾಟಿ ಸಿಲುಕಿಕೊಂಡಿದ್ದಾರೆ. ಈ ವಿಚಾರದಲ್ಲಿ ಯಾರೊಬ್ಬರೂ ಚರ್ಚೆ ಮಾಡುತ್ತಿಲ್ಲ. ಪಹಲ್ಗಾಮ್‍ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ಮಾಡಿದವರ ಪೈಕಿ ಈವರೆಗೆ ಒಬ್ಬರೂ ಸಿಕ್ಕಿಲ್ಲ. ಘಟನೆಯಲ್ಲಿ ಮೃತರಾದವರಿಗೆ ಕೇಂದ್ರ ಸರಕಾರ ಪರಿಹಾರವನ್ನು ನೀಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.