ಪಹಲ್ಗಾಮ್ ಭಯೋತ್ಪಾದಕ ದಾಳಿ | ಸಚಿವ ಸಂಪುಟ ಸಭೆಯಲ್ಲಿ ಖಂಡನಾ ನಿರ್ಣಯ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು.
ಸಭೆಯಲ್ಲಿ ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿ ಕುರಿತು ಖಂಡನಾ ನಿರ್ಣಯ ಕೈಗೊಳ್ಳಲಾಯಿತು.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮುಗ್ಧ ನಾಗರಿಕರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ನಮ್ಮ ಸರಕಾರವು ತೀವ್ರವಾಗಿ ಖಂಡಿಸುತ್ತದೆ. ಎಲ್ಲ ಮೃತರಿಗೆ ರಾಜ್ಯದ ಜನರ ಪರವಾಗಿ ನೋವಿನ ಸಂತಾಪಗಳನ್ನು ಸಲ್ಲಿಸಲಾಯಿತು.
ಉಗ್ರರ ದಾಳಿಗಳು ಮನುಷ್ಯ ಕುಲದ ಮೇಲೆ ನಡೆಸುತ್ತಿರುವ ಭೀಬತ್ಸ ಕೃತ್ಯಗಳು ಎಂದು ತೀರ್ಮಾನಿಸಬೇಕು. ಎಲ್ಲ ರೀತಿಯ ಉಗ್ರವಾದವನ್ನು ಬುಡಸಮೇತ ಕಿತ್ತು ಹಾಕಲು ಇಡೀ ದೇಶ ಒಂದಾಗಿ ನಿಂತು ಶ್ರಮಿಸಬೇಕು. ಈ ಘಟನೆಗೆ ಕಾರಣವಾಗಿರುವ ವೈಫಲ್ಯಗಳ ಕುರಿತು ಸಮರ್ಥವಾಗಿ ಮತ್ತು ಸಮರ್ಪಕವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಲು ತೀರ್ಮಾನಿಸಲಾಯಿತು.
ಮುಂದೆ ಈ ರೀತಿಯ ಯಾವುದೇ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ನಮ್ಮ ಸರಕಾರವು ರಾಜ್ಯದ ಜನರ ಪರವಾಗಿ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತದೆ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.