ʼಜಾತಿಗಣತಿ ವರದಿʼ ಬಗ್ಗೆ ಏನೂ ತೀರ್ಮಾನವಾಗದೆ ಕೊನೆಗೊಂಡ ಸಂಪುಟ ಸಭೆ ; ಸಚಿವರು ಹೇಳಿದ್ದೇನು?

Update: 2025-04-17 21:50 IST
ʼಜಾತಿಗಣತಿ ವರದಿʼ ಬಗ್ಗೆ ಏನೂ ತೀರ್ಮಾನವಾಗದೆ ಕೊನೆಗೊಂಡ ಸಂಪುಟ ಸಭೆ ; ಸಚಿವರು ಹೇಳಿದ್ದೇನು?
  • whatsapp icon

ಬೆಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಸಮೀಕ್ಷಾ (ಜಾತಿ ಗಣತಿ)ವರದಿ ಬಗ್ಗೆ ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ಸಚಿವರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಚರ್ಚೆ ಅಪೂರ್ಣವಾಗಿದೆ. ಅಲ್ಲದೆ, ಈ ಸಭೆಯಲ್ಲಿ ಯಾವುದೇ ಮಹತ್ವದ ತೀರ್ಮಾನವಾಗಿಲ್ಲ.

ಈ ಬಗ್ಗೆ ಮಾತನಾಡಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ‘ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಬಗ್ಗೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಸಚಿವರು ಅಸಮಾಧಾನ ವ್ಯಕ್ತಪಡಿಸಿಲ್ಲ. ದತ್ತಾಂಶಗಳ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘವಾದ ಚರ್ಚೆ ಮಾಡಿದ್ದೇವೆ. ಇನ್ನು ತಾಂತ್ರಿಕ ಅಂಶಗಳು ಅವಶ್ಯ ಎಂದು ಭಾವಿಸಿ, ಹಿರಿಯ ಅಧಿಕಾರಿಗಳಿಗೆ ತಾಂತ್ರಿಕ ದತ್ತಾಂಶ ಒದಗಿಸುವಂತೆ ಸೂಚಿಸಿದ್ದೇವೆ. ಚರ್ಚೆ ಅಪೂರ್ಣವಾಗಿದ್ದು, ಕೆಲವು ಸಚಿವರು ತಾಂತ್ರಿಕ ಮಾಹಿತಿಯನ್ನು ಕೇಳಿದ್ದಾರೆ. ಆ ಮಾಹಿತಿಯನ್ನು ಒದಗಿಸಲಾಗುವುದು. ಇಲಾಖೆ ಮಂತ್ರಿಯಾಗಿರುವ ಕಾರಣ ಆ ಮಾಹಿತಿಯನ್ನು ಒದಗಿಸುತ್ತೇನೆ. ಮುಂದಿನ ಮೇ 2 ರಂದು ನಡೆಯುವ ಸಚಿವ ಸಂಪುಟ ಸಭೆಗೆ ವರದಿಯ ವಿಷಯ ಚರ್ಚೆಗೆ ಬರಲಿದ್ದು, ವಿಸ್ತೃತವಾದ ಚರ್ಚೆ ನಡೆಯಲಿದೆ ಎಂದು   ಹೇಳಿದರು.

ಮುಖ್ಯಮಂತ್ರಿ ಅಭಿಪ್ರಾಯ ಕೇಳಿದ್ದಾರೆ:

‘ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯ ಬಗ್ಗೆ ಚರ್ಚೆ ಆಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲರ ಅಭಿಪ್ರಾಯಗಳನ್ನು ಕೇಳಿದ್ದಾರೆ. ಅಭಿಪ್ರಾಯಗಳನ್ನು ಮೌಖಿಕವಾಗಿಯಾದರೂ ನೀಡಬಹುದು ಇಲ್ಲವೇ ಲಿಖಿತ ರೂಪದಲ್ಲಿ, ಮುಂದಿನ ಸಂಪುಟ ಸಭೆಯೊಳಗೆ ತಿಳಿಸಲು ಹೇಳಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.

ಮಾಧ್ಯಮಗಳಿಂದಲೇ ಗೊಂದಲ ಸೃಷ್ಟಿ : 

ಜಾತಿಗಣತಿ ವರದಿ ಬಿಡುಗಡೆ ಕುರಿತು ಮಾಧ್ಯಮಗಳಿಂದಲೇ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ಆದರೆ, ಈ ಗೊಂದಲ ಬಗೆಹರಿಸುವ ಶಕ್ತಿ ದೇವರು ಸರಕಾರಕ್ಕೆ ನೀಡಿದ್ದಾನೆ. ಸಭೆಯಲ್ಲಿ ನಾವು ಸುದೀರ್ಘವಾಗಿ ಚರ್ಚೆ ಮಾಡಲಾಗಿದ್ದು, ಯಾವುದೇ ಗೊಂದಲ ಉಂಟಾಗಿಲ್ಲ. ಆದರೆ, ರಾಜ್ಯದ ಜನರಲ್ಲಿ ಮಾಧ್ಯಮಗಳಿಂದಲೇ ಗೊಂದಲ ಸೃಷ್ಟಿಸಲಾಗುತ್ತಿದೆ. ಇದನ್ನು ನಾವು ನಿವಾರಣೆ ಮಾಡುತ್ತೇವೆ. ರಾಜ್ಯದ ಎಲ್ಲ ಜನರ ಏಳಿಗೆ ದೃಷ್ಟಿಯಿಂದಲೇ ಸಾಮಾಜಿಕ ಸಮೀಕ್ಷೆ ಮಾಡಲಾಗಿದೆ. ಇದು ಅತ್ಯಂತ ಗಂಭೀರ ವಿಷಯವಾಗಿದ್ದು, ಕ್ಷುಲ್ಲಕ ರೀತಿ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ನಾವು ಯಾವ ಸಮುದಾಯಕ್ಕೂ ಅನ್ಯಾಯ ಆಗಲು ಬಿಡುವುದಿಲ್ಲ.ಇದೇ ಸರಕಾರದ ಉದ್ದೇಶ ಎಂದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಯಾವುದೇ ವಿರೋಧ ಆಗಿಲ್ಲ:

‘ಸಚಿವ ಸಂಪುಟದಲ್ಲಿ ಯಾವುದೇ ವಿರೋಧ ರೀತಿ ಆಗಿಲ್ಲ. ಎಲ್ಲ ಸಚಿವರು ತಮ್ಮ ಅಭಿಪ್ರಾಯಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟಿದ್ದಾರೆ. ಇಂದಿನ ಚರ್ಚೆ ಅಪೂರ್ಣವಾಗಿದ್ದು, ಮುಂದಿನ ಬಾರಿ ಈ ಬಗ್ಗೆ ಸಮಗ್ರ ಚರ್ಚೆ ನಡೆಸಿ ಯಾವ ಸಮುದಾಯಕ್ಕೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಚರ್ಚೆ ಅಪೂರ್ಣವಾಗಿದೆ:

‘ಇಂದಿನ ಸಚಿವ ಸಂಪುಟದಲ್ಲಿ ವರದಿ ಚರ್ಚೆ ಅಪೂರ್ಣವಾಗಿದೆ. ನಾನು ಯಾವ ಅಭಿಪ್ರಾಯ ಹೇಳಿದ್ದೇನೆ ಎಂದು ಇಲ್ಲಿ ತಿಳಿಸಲು ಸಾಧ್ಯವಿಲ್ಲ.ಆದರೆ, ಮುಂದಿನ ಚರ್ಚೆಯಲ್ಲಿ ಎಲ್ಲವೂ ಗೊತ್ತಾಗಲಿದೆ’ ಎಂದು ಸಚಿವ ಎಂಬಿ ಪಾಟೀಲ್‌ ಹೇಳಿದ್ದಾರೆ.

ಯಾರ ವಿರೋಧವಿಲ್ಲ:

ʼಎಲ್ಲ ಸಚಿವರು ಮಾಹಿತಿ ಕೇಳಿದ್ದು, ಅದನ್ನು ನೀಡಲು ಸಮಯ ಇದೆ. ಹೀಗಾಗಿ, ಎಲ್ಲರ ಅಭಿಪ್ರಾಯ ಕೇಳಿದ ಬಳಿಕ ಒಂದು ತೀರ್ಮಾನ ಕೈಗೊಳ್ಳಲಾಗುವುದು.ಇದಕ್ಕೆ ಯಾರ ವಿರೋಧವೂ ಇಲ್ಲʼ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News