ಬಿಎಸ್ಸೈ ನೇತೃತ್ವದ ಸಭೆಯಲ್ಲಿ ಬಂಡಾಯ ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಪಟ್ಟು
ಬೆಂಗಳೂರು: ‘ಪ್ರತ್ಯೇಕ ಹೋರಾಟ ಮಾತ್ರವಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಹಿರಂಗ ಹೇಳಿಕೆ ನೀಡಿ ಪಕ್ಷಕ್ಕೆ ಪೆಟ್ಟು ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಅವರ ತಂಡವೂ ‘ಕುಂಟ ಕಲ್ಲಂಗಡಿ ಹೊಲ ಕಾದಂಗೆ’ ಎಂಬ ಪರಿಸ್ಥಿತಿಯಲ್ಲಿ ಸಿಲುಕಿದೆ’ ಎಂದು ಸ್ವತಃ ಬಿಜೆಪಿ ನಾಯಕರೇ ವ್ಯಂಗ್ಯವಾಡಿದ್ದಾರೆ.
ರವಿವಾರ ಇಲ್ಲಿನ ಡಾಲರ್ಸ್ ಕಾಲನಿಯ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯುದ್ದಕ್ಕೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಂಡಾಯದ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಮಾಜಿ ಸಚಿವರು, ಹಾಲಿ ಶಾಸಕರು, ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.
ವಕ್ಫ್ ಆಸ್ತಿ ವಿರುದ್ಧ ಮುಂದಿನ ಹೋರಾಟ ಹಾಗೂ ಪ್ರಸ್ತುತ ರಾಜ್ಯದಲ್ಲಿನ ವಿದ್ಯಮಾನಗಳ ಬಗ್ಗೆ ಚರ್ಚೆ ಒಂದೆಡೆಯಾದರೆ, ಯತ್ನಾಳ್ ಪ್ರತ್ಯೇಕ ಹೋರಾಟ ಹಾಗೂ ವಿಜಯೇಂದ್ರ ವಿರುದ್ಧ ಬಹಿರಂಗ ಹೇಳಿಕೆ ಸಂಬಂಧ ತಮ್ಮ ಅಹವಾಲುಗಳನ್ನು ಯಡಿಯೂರಪ್ಪ ಮುಂದಿಟ್ಟರು. ಮಾತ್ರವಲ್ಲದೆ, ‘ಯತ್ನಾಳ್ ವಿರುದ್ಧ ತುರ್ತು ಕ್ರಮ ತೆಗೆದುಕೊಳ್ಳಬೇಕು, ಇಲ್ಲವಾದರೆ ಪಕ್ಷಕ್ಕೆ ಧಕ್ಕೆಯಾಗುತ್ತದೆ’ ಎಂದು ಪಟ್ಟುಹಿಡಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಎಂ.ಪಿ.ರೇಣುಕಾಚಾರ್ಯ, ‘ಕುಂಟ ಕಲ್ಲಂಗಡಿ ಹೊಲ ಕಾದಂಗೆ’ ಅವರ(ಯತ್ನಾಳ್ ತಂಡದ) ಪರಿಸ್ಥಿತಿ. ಅಲ್ಲದೆ, ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಬೇಕು. ಹಾಗಾಗಿ, ವಿಜಯೇಂದ್ರ ಸಾರಥ್ಯದಲ್ಲಿಯೇ ಚುನಾವಣೆ ನಡೆಯಲಿದೆ. ಈ ಬಗ್ಗೆ 40ಕ್ಕೂ ಹೆಚ್ಚು ಶಾಸಕರು ಸೇರಿ ಮಾತಾಡಿದ್ದೇವೆ ಎಂದರು.
ವಿಜಯೇಂದ್ರ ಅವರೇ ಮುಂದಿನ ಚುನಾವಣೆವರೆಗೆ ಅಧ್ಯಕ್ಷರಾಗಿರುತ್ತಾರೆ. ನಾವು ಯಡಿಯೂರಪ್ಪ ಜೊತೆಗಿದ್ದೇವೆ ಎಂಬ ಸಂದೇಶ ಕೊಟ್ಟಿದ್ದೇವೆ ಎಂದ ಅವರು, ಡಿ.10ರಂದು ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಪಕ್ಷದ ನಾಯಕರು ಪಕ್ಷ ಸೇರಲಿದ್ದಾರೆ ಎಂದು ಅವರು ಹೇಳಿದರು.
ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಹೈಕಮಾಂಡ್ ಇರುವುದು ಅಧ್ಯಕ್ಷರ ಪರವಾಗಿ, ಅಗತ್ಯತೆ ಬಿದ್ದರೆ ನಾವೆಲ್ಲರೂ ಹೋಗಿ ಹೈಕಮಾಂಡ್ ಭೇಟಿ ಮಾಡುತ್ತೇವೆ. ಅದು ಅಲ್ಲದೆ, ವಿಜಯೇಂದ್ರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ ಎಂದು ನುಡಿದರು.
ಹರತಾಳ್ ಹಾಲಪ್ಪ ಮಾತನಾಡಿ, ನಡೆದಿರುವ ಎಲ್ಲ ಬೆಳವಣಿಗೆಗಳನ್ನು ಸಭೆಯಲ್ಲಿಯೇ ವಿವರಿಸಿದ್ದೇವೆ. ಶೀಘ್ರದಲ್ಲಿಯೇ ಎಲ್ಲವೂ ಸರಿಹೋಗಲಿದೆ ಅಂದಿದ್ದಾರೆ. ಡಿ.10ರಂದು ಮತ್ತೆ ಸಭೆ ಸೇರುತ್ತೇವೆ. ಜತೆಗೆ ಎಲ್ಲ ಕಡೆ ಪ್ರವಾಸ ಹೋಗಲು ಅಧ್ಯಕ್ಷರ ಬಳಿ ವಿನಂತಿ ಮಾಡಿದ್ದೇವೆ. ಅದರಂತೆ ಸಂಘಟನೆ ಮಾಡುವಂತೆ ಹೇಳಿದ್ದಾರೆ. ಮುಂದಿನ ಚುನಾವಣೆವರೆಗೂ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ಮುಂದುವರೆಸಬೇಕೆಂದು ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದೇವೆ ಎಂದು ಹೇಳಿದರು.
‘ನಿಷ್ಠೆ ಎಂಬುದು ಸನ್ನಿವೇಶದ ಅವಶ್ಯಕತೆ ಅಲ್ಲ, ಜೀವನದ ಜೀವಾಳ. ರಾಷ್ಟ್ರ ನಿಷ್ಠೆ-ಪಕ್ಷ ನಿಷ್ಠೆ ಅತ್ಯಂತ ಶ್ರೇಷ್ಠವಾದದು. ಇವತ್ತಿನ ಬಿಜೆಪಿಯ ಕೆಲವರ ಹೇಳಿಕೆ-ಪ್ರತಿಹೇಳಿಕೆ (ನಿಷ್ಠಾವಂತರ?)ಕೇಳುತ್ತಾ ಹಿರಿಯರಾದ ದಿ.ಅನಂತ್ ಕುಮಾರ್ ಹೇಳುತ್ತಿದ್ದ ಮೇಲಿನ ಮಾತು ನೆನಪಾಯಿತು’
-ಸಿ.ಟಿ.ರವಿ, ಬಿಜೆಪಿ ಮುಖಂಡ