ನಮ್ಮ ಮನೆಗೆ, ನಮ್ಮ ಅಜ್ಜನ ಮನೆಗೆ ಯಾರೂ ಬಂದು ಗಣತಿ ಮಾಡಿಲ್ಲ: ನಿಖಿಲ್ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ಜಾತಿಗಣತಿ ಎನ್ನುವುದು ಕ್ರಮಬದ್ಧವಾಗಿ, ವೈಜ್ಞಾನಿಕವಾಗಿ ನಡೆದಿಲ್ಲ. ನಮ್ಮ ಮನೆಗಾಗಲಿ, ನಮ್ಮ ಅಜ್ಜ ದೇವೇಗೌಡರ ಮನೆಗಾಗಲಿ ಯಾರೂ ಬಂದು ಗಣತಿ ಮಾಡಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲನೆಯದಾಗಿ ಜಾತಿಗಣತಿ ವರದಿಯಲ್ಲಿ ಏನಿದೆ ಎನ್ನುವುದನ್ನು ಬಹಿರಂಗಪಡಿಸಬೇಕು. ಆದಾದ ನಂತರ ನಾವು ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂಬ ತೀರ್ಮಾನ ಮಾಡುತ್ತೇವೆ. ಒಂದಂತೂ ಸತ್ಯ, ಈ ಜಾತಿಗಣತಿ ವೈಜ್ಞಾನಿಕವಾಗಿ ನಡೆದಿಲ್ಲ ಎಂದರು.
ರಾಜಕೀಯ ಸಂಕಷ್ಟ ಕಾಲ ಬಂದಾಗ ಕೆಲವರಿಗೆ ಇಂತಹ ವಿಚಾರಗಳು ನೆನಪಿಗೆ ಬರುತ್ತವೆ. ಸಿದ್ದರಾಮಯ್ಯನವರು ಅಹಿಂದ ಹೆಸರಿನಲ್ಲಿ ಎರಡು ಬಾರಿ ಮುಖ್ಯಮಂತ್ರಿ, ಹಣಕಾಸು ಸಚಿವರು, ಉಪಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಇಷ್ಟೆಲ್ಲಾ ಆಗಿದ್ದಾರೆ ಅವರಿಗೆ ಅಹಿಂದ ಜನರನ್ನು ಉದ್ಧಾರ ಮಾಡುವುದು ಸಾಧ್ಯವಾಗಿಲ್ಲ. ರಾಜಕೀಯ ಗಿಮಿಕ್ ಮಾಡಿಕೊಂಡು ತಿರುಗಾಡುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ದೂರಿದರು.