ʼಜಾತಿಗಣತಿʼ ವರದಿ ವಿರೋಧಿಸುವ ಜನಪ್ರತಿನಿಧಿಗಳಿಗೆ ಘೇರಾವ್ : ಹಿಂದುಳಿದ ಜಾತಿಗಳ ಒಕ್ಕೂಟ ಎಚ್ಚರಿಕೆ
ಬೆಂಗಳೂರು: ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ವಿವಿಧ ವರದಿಗಳನ್ನು ವಿರೋಧಿಸಿದ ಸಮುದಾಯಗಳೇ ಇಂದು ಎಚ್.ಕಾಂತರಾಜು ನೇತೃತ್ವದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ(ಜಾತಿಗಣತಿ) ವರದಿಯನ್ನೂ ವಿರೋಧ ಮಾಡುತ್ತಿದ್ದು, ಜನಪ್ರತಿನಿಧಿಗಳು ಜಾತಿಗಣತಿ ವರದಿಯನ್ನು ವಿರೋಧಿಸಿದ್ದಲ್ಲಿ, ಅವರನ್ನು ಘೇರಾವ್ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ಬುಧವಾರ ಇಲ್ಲಿನ ಗಾಂಧಿನಗರದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಮಾತನಾಡಿ, ಹಿಂದೆ ಪ್ರಬಲ ಸಮುದಾಯಗಳು ವರದಿಗಳನ್ನು ಜಾರಿ ಮಾಡುವಲ್ಲಿ ವಿರೋಧ ವ್ಯಕ್ತಪಡಿಸಿ ತಡೆಹಿಡಿಯುತ್ತಿದ್ದವು. ಆಗ ಅವರನ್ನು ಎದುರಿಸಲು ನಮಗೆ ಶಕ್ತಿ ಇರಲಿಲ್ಲ. ಈಗ ಶೋಷಿತ ಸಮುದಾಯಗಳೆಲ್ಲವೂ ಸಂಘಟಿತವಾಗಿದ್ದು, ಪ್ರಬಲ ಸಮುದಾಯಗಳ ವಿರೋಧವನ್ನು ದಮನ ಮಾಡುತ್ತೇವೆ ಎಂದರು.
ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿ 2018ರಲ್ಲಿ ಸಿದ್ದವಾಗಿದೆ. ಹೀಗಾಗಿ ವರದಿಯನ್ನು ಹತ್ತು ವರ್ಷಗಳ ಹಿಂದೆ ಸಿದ್ದಪಡಿಸಿಲ್ಲ, 4-5 ವರ್ಷಗಳ ಹಿಂದೆ ಮಾತ್ರ ವರದಿ ಸಿದ್ದವಾಗಿದೆ. ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ 2015ರಲ್ಲಿ ಸಮೀಕ್ಷೆ ನಡೆಸಲು ನಿರ್ದೇಶನ ನೀಡಿದ್ದರು. ಹೀಗಾಗಿ ಸಾಮಾಜಿಕ ನ್ಯಾಯ ಒದಗಿಸಲು ರಾಜ್ಯದಲ್ಲಿ ಜಾತಿಗಣತಿ ವರದಿಯನ್ನು ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ವಿರೋಧ ಮಾಡುವುದೇ ಕೆಲವರ ಚಟವಾಗಿದೆ. ಜನಪ್ರತಿನಿಧಿಗಳು ಜಾತಿಗಣತಿ ವರದಿ ಜಾರಿಗೆ ವಿರೋಧ ಮಾಡಿದರೆ, ಮೊದಲು ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಒಂದು ವೇಳೆ ಮನವರಿಕೆ ವಿಫಲವಾದರೆ ಅವರನ್ನು ಫೇರಾವ್ ಮಾಡುತ್ತೇವೆ. ಅವರು ಹೋಗುವ ಸಭೆ-ಸಮಾರಂಭಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ. ಹಾಗೆಯೇ ಮುಂದಿನ ಚುನಾವಣೆಯಲ್ಲಿ ಅವರನ್ನು ಸೋಲಿಸುತ್ತೇವೆ ಎಂದು ಕೆ.ಎಂ. ರಾಮಚಂದ್ರಪ್ಪ ಎಚ್ಚರಿಕೆ ನೀಡಿದರು.
ಜಾತಿಗಣತಿ ವರದಿಯನ್ನು ಚರ್ಚೆಗೆ ಒಳಪಡಿಸಬೇಕು. ನ್ಯೂನ್ಯತೆಗಳಿದ್ದರೆ ಸರಿಪಡಿಸಲಾಗುವುದು. ಆದರೆ ತೆರಿಗೆ ಹಣದಿಂದ ಸಿದ್ದಪಡಿಸಿದ ವರದಿಯನ್ನೇ ತಿರಸ್ಕರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಶೋಷಿತ ಸಮುದಾಯಗಳ ಮತಗಳಿಂದಲೇ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಈ ಸಮುದಾಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾತಿಗಣತಿ ವರದಿ ಜಾರಿಯಾಗಬೇಕು ಎಂದು ಹೇಳಿದರು.
ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಒಕ್ಕೂಟವು ಮೂರು-ನಾಲ್ಕು ವರ್ಷಗಳಿಂದ ಜಾತಿಗಣತಿಯ ವರದಿಯನ್ನು ಪಡೆದು ಜಾರಿ ಮಾಡುವಂತೆ ನಿರಂತರ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದೆ. ಇದಕ್ಕೆ ಪ್ರತಿಫಲವಾಗಿ ರಾಜ್ಯ ಸರಕಾರವು ಜಾತಿಗಣತಿ ವರದಿಯನ್ನು ಪಡೆದು ಸಚಿವ ಸಂಪುಟದಲ್ಲಿ ಮಂಡಿಸುತ್ತಿದೆ ಎಂದರು.
ಜಾತಿಗಣತಿಗೆ ವಿರೋಧವಾಗಿರುವ ಬಣ, ವರದಿಯ ಚರ್ಚೆಗೆ ಬರುವ ಮುನ್ನ ಹೋರಾಟ ಮಾಡುವುದಾಗಿ ಹೇಳುತ್ತಿದೆ. ಸಿದ್ದರಾಮಯ್ಯರ ನಾಯಕತ್ವವನ್ನು ದುರ್ಬಲಗೊಳಿಸಲು ಬಿಜೆಪಿ ಜೊತೆ ಕಾಂಗ್ರೆಸ್‍ನ ಕೆಲವರು ಕೈಜೋಡಿಸಿದಂತಿದೆ. ಹೀಗಾಗಿ ಕಾಂಗ್ರೆಸ್‍ನ ಕೆಲವರು ಜಾತಿಗಣತಿ ವರದಿಗೆ ವಿರೋಧವಾಗಿದ್ದಾರೆ ಎಂದು ಅವರು ಹೇಳಿದರು.
ಗುರುವಾರ(ಎ.16) ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆಯಾಗಲಿದೆ. ಸಭೆಯ ನಿರ್ಣಯಗಳು ಶೋಷಿತ ಸಮುದಾಯಗಳ ಪರ ಇರಲಿವೆ ಎಂದು ನಂಬಿಕೆ ಇದೆ. ಸಂಪುಟ ಸಭೆಯ ತೀರ್ಮಾನಗಳನ್ನು ಗುರುತಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ದಲಿತ ಮುಖಂಡ ಇಂದೂಧರ ಹೊನ್ನಾಪುರ ಮಾತನಾಡಿ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಜಾತಿಗಣತಿಯ ಪರವಾಗಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‍ನ ಕೆಲ ಜನಪ್ರತಿನಿಧಿಗಳು ಜಾತಿಗಣತಿ ಸಮೀಕ್ಷೆಯನ್ನು ವಿರೋಧಿಸುತ್ತಿರುವುದೇ ವಿಪರ್ಯಾಸ ಎಂದರು.
‘ಕಾಂಗ್ರೆಸ್‍ನ ಶಾಸಕ ಶಾಮನೂರು ಶಿವಶಂಕರಪ್ಪ ಜಾತಿಗಣತಿ ವರದಿಯ ಬಗ್ಗೆ ನೀಡಿರುವ ಹೇಳಿಕೆಗಳನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ, ಕಾಂಗ್ರೆಸ್‍ನ ಚುನಾವಣಾ ಪ್ರಣಾಳಿಕೆ ವಿರುದ್ಧ ಮಾತನಾಡುವ ಶಾಸಕ ಶಾಮನೂರು ಶಿವಶಂಕರಪ್ಪ ರಾಜೀನಾಮೆಯನ್ನು ನೀಡಲಿ. ಮತ್ತೆ ಚುನಾವಣೆಗೆ ನಿಂತು ಗೆದ್ದು ಬರಲಿ. ಜಾತಿಗಣತಿ ವರದಿಯನ್ನು ವಿರೋಧಿಸುವ ಜನಪ್ರತಿನಿಧಿಗಳನ್ನು ಹೇಗೆ ಸೋಲಿಸಬೇಕು ಎಂಬ ರಾಜಕೀಯ ತಂತ್ರಗಾರಿಕೆ ನಮಗೆ ತಿಳಿದಿದೆ’
-ಕೆ.ಎಂ. ರಾಮಚಂದ್ರಪ್ಪ, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ
‘ವಿಪಕ್ಷದ ನಾಯಕ ಆರ್.ಆಶೋಕ್, ವಿಜಯೇಂದ್ರ ಸೇರಿದಂತೆ ಮತ್ತಿತರ ಬಿಜೆಪಿ ಮುಖಂಡರು ಸೇರಿ ಕುಮಾರಸ್ವಾಮಿ ಅನಗತ್ಯವಾಗಿ ಜಾತಿಗಣತಿಯ ವರದಿಯನ್ನು ವಿರೋಧ ಮಾಡುತ್ತಿದ್ದಾರೆ. ಎಸ್ಸಿ, ಎಸ್ಟಿ, ಓಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಸಂವಿಧಾನಿಕ ಹಕ್ಕುಗಳನ್ನು ನೀಡದೆ, ವಂಚನೆ ಮಾಡುವ ಸಲುವಾಗಿ ಜಾತಿಗಣತಿಯ ವರದಿಯನ್ನು ವಿರೋಧಿಸುತ್ತಿದ್ದಾರೆ. ಜಾತಿಗಣತಿ ವರದಿ ವಿಚಾರವಾಗಿ ಬಿಜೆಪಿ-ಜೆಡಿಎಸ್ ಜನಪ್ರತಿನಿಧಿಗಳು ಬಾಯಿ ಮುಚ್ಚಿಕೊಂಡು ಇರಬೇಕು. ಇಲ್ಲವಾದಲ್ಲಿ ವಿಧಾನಸಭೆಯನ್ನು ಪ್ರವೇಶ ಮಾಡಲು ಸಾಧ್ಯವಾಗದಂತೆ ಮಾಡುತ್ತೇವೆ.
-ಅನಂತ್ ನಾಯ್ಕ್, ವಕೀಲ