ʼಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ವರದಿ ಜಾರಿ ಮಾಡಲೇಬೇಕುʼ: ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ನಾಯಕರ ಒಕ್ಕೊರಲ ಆಗ್ರಹ

Update: 2025-04-16 19:31 IST
ʼಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ವರದಿ ಜಾರಿ ಮಾಡಲೇಬೇಕುʼ: ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ನಾಯಕರ ಒಕ್ಕೊರಲ ಆಗ್ರಹ
  • whatsapp icon

ಬೆಂಗಳೂರು : ರಾಜ್ಯ ಸರಕಾರವು ಸಮಾನತೆ, ಸಾಮಾಜಿಕ ನ್ಯಾಯವನ್ನು ಎಲ್ಲಾ ವರ್ಗದ ಜನರಿಗೂ ನೀಡುವ ಉದ್ದೇಶದಿಂದ ಮಾಡಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯನ್ನು ಜಾರಿ ಮಾಡಲೇಬೇಕು ಎಂದು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ನಾಯಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ವಿಧಾನಪರಿಷತ್ ಸದಸ್ಯರಾದ ಎಂ.ಆರ್.ಸೀತಾರಾಮ್, ಉಮಾಶ್ರೀ, ನಾಗರಾಜ್ ಯಾದವ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸೇರಿದಂತೆ ಇನ್ನಿತರರು ಜಂಟಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಅತ್ಯಂತ ಉತ್ತಮ ರೀತಿಯಲ್ಲಿ ಕಾಂತರಾಜ ಆಯೋಗವು ಸಮೀಕ್ಷೆ ಮಾಡಿದೆ. ಈ ವರದಿಯು ಸೋರಿಕೆಯಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದು ಯಾವುದೋ ಒಂದು ಜನಾಂಗಕ್ಕೆ ಸೀಮಿತವಾದ ಸಮೀಕ್ಷೆಯಲ್ಲ. ರಾಜ್ಯದಲ್ಲಿರುವ ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಿಕೊಡುವ, ಎಲ್ಲರ ಅಭಿವೃದ್ಧಿಗೆ ಪೂರಕವಾಗಿರುವ ವರದಿ ಎಂದು ಅವರು ತಿಳಿಸಿದರು.

ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, 1931 ರಿಂದಲೂ ಯಾವುದೇ ರೀತಿಯ ಜಾತಿಗಣತಿ ನಡೆದಿಲ್ಲ. ಮಂಡಲ್ ತೀರ್ಪಿನ ನಂತರ ಸರ್ವೋಚ್ಚ ನ್ಯಾಯಾಲಯ ಅಂದಿನವರೆಗಿನ ಹಿಂದುಳಿದ ವರ್ಗಗಳ ಸ್ಥಿತಿಗತಿಯನ್ನು ಅರಿತು, ಇವುಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ರಚನೆ ಮಾಡಿ ತೀರ್ಪು ನೀಡಿತು. ಅದರಂತೆ ಹಿಂದುಳಿದ ವರ್ಗಗಳ ಆಯೋಗ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.

2015ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ ಅವರಿಗೆ ಈ ಜಾತಿ ಸಮೀಕ್ಷೆ ನಡೆಸುವ ಜವಾಬ್ದಾರಿ ನೀಡಿದ್ದರು. ಇದಕ್ಕಾಗಿ 162 ಕೋಟಿ ರೂ.ಗಳ ಖರ್ಚನ್ನು ಸಹ ಸರಕಾರ ಭರಿಸಿತ್ತು. ಒಟ್ಟು 55 ಪ್ರಶ್ನಾವಳಿ ಆಧರಿಸಿ ಕಾಂತರಾಜ ಆಯೋಗ ಸಮೀಕ್ಷೆ ಮಾಡಿ ತಯಾರು ಮಾಡಿದ ವರದಿಯನ್ನು ತದನಂತರ ಬಂದ ಜಯಪ್ರಕಾಶ್ ಹೆಗ್ಡೆ ಆಯೋಗ ಸರಕಾರಕ್ಕೆ ಒಪ್ಪಿಸಿದೆ ಎಂದು ಅವರು ತಿಳಿಸಿದರು.

ಇದರ ಜೊತೆಗೆ ಜಯಪ್ರಕಾಶ್ ಹೆಗಡೆ ಆಯೋಗ ತಯಾರಿಸಿದ ನೂತನ ಮೀಸಲಾತಿ ಪಟ್ಟಿಯನ್ನು ಸಹ ಸರಕಾರಕ್ಕೆ ಸಲ್ಲಿಸಿದೆ. ಮಾಧ್ಯಮಗಳ ಮಾಹಿತಿ ಪ್ರಕಾರ 1 ಕೋಟಿ 35 ಲಕ್ಷ ಕುಟುಂಬಗಳ ಸಮೀಕ್ಷೆ ನಡೆದಿದ್ದು, 5,98,14,942 ದತ್ತಾಂಶ (ಸಮೀಕ್ಷೆ)ಕ್ಕೆ ಒಳಗಾಗಿದ್ದಾರೆ. ಈ ಸಮೀಕ್ಷೆಯಲ್ಲಿ 1.66 ಲಕ್ಷ ಸರಕಾರಿ ನೌಕರರು ತಮ್ಮನ್ನು ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಈ ವರದಿ ಇನ್ನೆರಡು ದಿನಗಳಲ್ಲಿ ಹೊರಬೀಳಲಿದ್ದು, ಸಚಿವ ಸಂಪುಟದಲ್ಲಿಯೂ ಚರ್ಚೆಯಾಗುತ್ತದೆ. ಒಟ್ಟಿನಲ್ಲಿ ಈ ಗಣತಿ ಅಸಮಾನತೆಯ ತಾರತಮ್ಯವನ್ನು ತೊಡೆದುಹಾಕುವುದರಲ್ಲಿ ಸಂಶಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ವಿಧಾನಪರಿಷತ್ ಸದಸ್ಯ ಎಂ.ಆರ್.ಸೀತಾರಾಂ ಮಾತನಾಡಿ, ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯ ಮುಂದೆ ವರದಿ ಚರ್ಚೆಗೆ ಬರಲಿದೆ. ಎಲ್ಲಾ ಸಚಿವರು ಚರ್ಚೆ ಮಾಡಲಿ. ಈ ವರದಿಯನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಕಾಂತರಾಜ ವರದಿ ಸವಿಸ್ತಾರವಾಗಿದೆ. ಜನರನ್ನು ಈ ವರದಿಯ ಬಗ್ಗೆ ಉದ್ರೇಕಗೊಳಿಸುವುದು ಬೇಡ ಎಂದು ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯೆ ಉಮಾಶ್ರೀ ಮಾತನಾಡಿ, ಕಾಂತರಾಜ ಆಯೋಗದ ವರದಿಯೂ ಭವಿಷ್ಯದಲ್ಲಿ ಜನಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಲು ಭದ್ರ ಬುನಾದಿಯಾಗಲಿದೆ. ಮುಂದಿನ ದಿನಗಳಲ್ಲಿ ಈ ವರದಿಯಲ್ಲಿ ಅಂಶಗಳನ್ನು ಸೇರಿಸಲು ಅವಕಾಶವಿದೆ. ಇದು ಕೇವಲ ಜಾತಿಜನಗಣತಿಯಲ್ಲ. ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ವರದಿ. ಇದರ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿ, ಜನರನ್ನು ದಾರಿ ತಪ್ಪಿಸುವುದು ಬೇಡ. ಸಚಿವ ಸಂಪುಟ ಈ ವರದಿಯನ್ನು ಒಪ್ಪಿಕೊಳ್ಳಲೇಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ನಾಗರಾಜ್ ಯಾದವ್, ಅಖಿಲ ಕರ್ನಾಟಕ ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್, ಮಾಜಿ ಮೇಯರ್‍ಗಳಾದ ಪಿ.ಆರ್. ರಮೇಶ್, ಡಿ.ವೆಂಕಟೇಶ್ ಮೂರ್ತಿ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News