ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯ ಕುರಿತು ಮಹತ್ವದ ಸಂಪುಟ ಸಭೆ

Update: 2025-04-17 11:58 IST
ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯ ಕುರಿತು ಮಹತ್ವದ ಸಂಪುಟ ಸಭೆ
  • whatsapp icon

ಬೆಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಸಮೀಕ್ಷಾ (ಜಾತಿ ಗಣತಿ)ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿದ ಬೆನ್ನಲ್ಲೆ ಪರ-ವಿರೋಧ ಚರ್ಚೆ ಆರಂಭವಾಗಿದೆ. ಈ ಮಧ್ಯೆ ಇಂದು (ಎ.17) ಸಂಜೆ 4ಗಂಟೆಗೆ ಮಖ್ಯಮಂತ್ರಿ ಸಿದ್ದರಾಮಯ್ಯರ ಅಧ್ಯಕ್ಷತೆಯಲ್ಲಿ ಮಹತ್ವದ ಸಂಪುಟ ಸಭೆ ನಡೆಯಲಿದ್ದು, ಈ ಸಭೆ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ(ಜಾತಿ ಜಗಣತಿ) ಸಮೀಕ್ಷಾ ವರದಿಯ ಕುರಿತು ಚರ್ಚಿಸಲು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಚಿವ ಸಂಪುಟ ಸಭಾ ಭವನದಲ್ಲಿ ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ.

‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದ್ದಾರೆ. ಆದರೆ, ವರದಿ ಬಹಿರಂಗಗೊಳ್ಳುವ ಮೊದಲೇ ಒಕ್ಕಲಿಗ ಮತ್ತು ವೀರಶೈವ ಲಿಂಗಾಯತ ಸಮುದಾಯಗಳು ವರದಿ ಜಾರಿಗೆ ಬಂದರೆ ಬೀದಿಗಿಳಿಯುವ ಎಚ್ಚರಿಕೆಯನ್ನು ನೀಡಿವೆ.

ಈ ಮಧ್ಯೆ ‘ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ’, ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಜಾರಿಗೊಳಿಸುವುದನ್ನು ವಿರೋಧಿಸುವ ಜನಪ್ರತಿನಿಧಿಗಳ ವಿರುದ್ಧ ಘೇರಾವ್’ ಹಾಕುವ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿವೆ. ಹೀಗಾಗಿ ರಾಜ್ಯ ಸರಕಾರ ಅಕ್ಷರಶಃ ಅಡ್ಡಕತ್ತರಿಯಲ್ಲಿ ಸಿಲುಕಿದೆ.

ಈ ಬೆಳವಣಿಗೆಗಳ ನಡುವೆ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯ ಪ್ರತಿಯನ್ನು ಸಂಪುಟದ ಎಲ್ಲ ಸಚಿವರಿಗೆ ನೀಡಿದ್ದು, ವರದಿ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಸಾಧಕ-ಬಾಧಕಗಳ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಲು ಎಲ್ಲ ಸಚಿವರಿಗೆ, ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.

ಆದುದರಿಂದ ಇಂದು(ಎ.17) ನಡೆಯಲಿರುವ ಸಂಪುಟ ಸಭೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭವಿಷ್ಯ ನಿರ್ಧಾರವಾಗಲಿದ್ದು, ಸಂಪುಟ ಸಭೆ ವಿಶೇಷ ಮಹತ್ವ ಪಡೆದುಕೊಂಡಿದೆ. ಹೀಗಾಗಿಯ ರಾಜಕೀಯ ವಲಯವೂ ಸೇರಿದಂತೆ ರಾಜ್ಯದ ಎಲ್ಲರ ಚಿತ್ತ  ಸಚಿವ ಸಂಪುಟ ಸಭೆಯತ್ತ ನೆಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News