ವೃತ್ತಿಪರ ಮಹಿಳಾ ಹಾಸ್ಟೆಲ್‍ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ

Update: 2024-10-21 17:59 GMT

ಕಲಬುರಗಿ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ರವಿವಾರ ಸಂಜೆ ಕಲಬುರಗಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ವೃತ್ತಿಪರ ಮಹಿಳಾ ಹಾಸ್ಟೆಲ್ ಗೆ ಭೇಟಿ ನೀಡಿ ನಿಲಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಅಹವಾಲುಗಳನ್ನು ಆಲಿಸಿದರು.

ಊಟ ಸರಿಯಾಗಿ ನೀಡುತ್ತಿಲ್ಲ, ಬೇರೆ ಕಡೆ ಊಟ ಸಿದ್ಧಪಡಿಸಿ ಇಲ್ಲಿಗೆ ತಂದು ಪೂರೈಸಲಾಗುತ್ತಿದೆ. ವಸತಿ ನಿಲಯದಲ್ಲಿ ವಿದ್ಯುತ್, ಫ್ಯಾನ್ ಸೇರಿದಂತೆ ಮೂಲಸೌಕರ್ಯ ಕೊರತೆ ಇದೆ ಎಂದು ವಿದ್ಯಾರ್ಥಿನಿಯರು ಅಧ್ಯಕ್ಷರ ಗಮನಕ್ಕೆ ತಂದರು. ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಇದೇ ವೇಳೆ ಅಧ್ಯಕ್ಷರು ಸೂಚನೆ ನೀಡಿದರು.

ನಂತರ ವಿಶ್ವವಿದ್ಯಾಲಯದ ಅವರಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ವಸತಿ ನಿಲಯಕ್ಕೂ ಭೇಟಿ ನೀಡಿದ ನಾಗಲಕ್ಷ್ಮೀ ಚೌಧರಿ, ಅಲ್ಲಿರುವ ವಿದ್ಯಾರ್ಥಿಗಳ ಕುಂದುಕೊರತೆಗೆ ಕಿವಿಯಾದರು. ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಿವಶರಣಪ್ಪ, ಕಲಬುರಗಿ ನಗರ ಸಿ.ಡಿ.ಪಿ.ಓ ಭೀಮರಾಯ ಕಣ್ಣೂರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ನಾಗಲಕ್ಷ್ಮೀ ಚೌಧರಿ ಅವರು ಕಲಬುರಗಿ ನಗರದ ಅಳಂದ ರಸ್ತೆಯ ರಾಣಸ್ಪೀರ್ ದರ್ಗಾ ರಸ್ತೆಯಲ್ಲಿರುವ ಮಾರ್ಗದರ್ಶಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ನೆಮ್ಮದಿ ಹಿರಿಯರ ಮನೆ (ವ್ರದ್ದಾಶ್ರಮ)ಕ್ಕೆ ಭೇಟಿ ನೀಡಿ ಹಿರಿಯ ಜೀವಿಗಳ ಆರೋಗ್ಯ ಕ್ಷೇಮ ವಿಚಾರಿಸಿದಲ್ಲದೆ ಅವರೊಂದಿಗೆ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

ಮಾರ್ಗದರ್ಶಿ ಸಂಸ್ಥೆಯ ಕಾರ್ಯದರ್ಶಿ ಆನಂದರಾಜ, ವ್ರದ್ದಾಶ್ರಮದ ಅಧೀಕ್ಷಕಿ ಬಸಮ್ಮ ಸ್ವಾಮಿ ಅಲ್ಲದೆ ಪರಮೇಶ ಅಲಗೂಡ, ಪ್ರಕಾಶ್ ಖಾತ್ರಿ, ಯುವರಾಜ್ ಜಾಗಿರದಾರ್, ಶಿವರಾಜ್ ಪೂಜಾರಿ, ಶರಣು ಬೇಲೂರ, ಸತೀಶ್ ಪೂಜಾರಿ, ಯಲಗೊಂಡ ಹಿರೆಕುರುಬರ ಹಾಗೂ ಮತ್ತಿತರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News