ಕಾಂಗ್ರೆಸ್‌ ಸರಕಾರದಿಂದ ಬಿಜೆಪಿ ನಾಯಕರ ವಿರುದ್ಧ ಷಡ್ಯಂತ್ರ : ಛಲವಾದಿ ನಾರಾಯಣಸ್ವಾಮಿ

Update: 2024-11-29 15:26 GMT

ಬೆಂಗಳೂರು : ಬಿಡಿಎ ವಿಚಾರದಲ್ಲಿ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಂದ ವಿಚಾರಣೆಗೆ ಅನುಮತಿ ಕೇಳಲು ಕಾಂಗ್ರೆಸ್ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಈ ಪ್ರಕರಣ ಖುಲಾಸೆ ಆಗಿದ್ದರೂ ಸರಕಾರ ಬಿಜೆಪಿ ನಾಯಕರ ವಿರುದ್ಧದ ಷಡ್ಯಂತ್ರ ಮತ್ತು ಹಗೆತನದ ರಾಜಕೀಯ ಮಾಡುತ್ತಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ಅಬಕಾರಿ ಸಚಿವರ ವಿರುದ್ಧ ಆರೋಪಗಳಿವೆ. ವಿಡಿಯೋಗಳು, ಆಡಿಯೋಗಳೂ ಬಂದಿವೆ. ಈ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಸಚಿವ ತಿಮ್ಮಾಪುರ ವಿರುದ್ಧ 700 ಕೋಟಿ ಲಂಚದ ಹಗರಣ ಇದ್ದರೂ ಕೂಡ ಸರಕಾರ ಅವರನ್ನು ರಕ್ಷಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ಅಬಕಾರಿ ಇಲಾಖೆಯ ಹಗರಣದಲ್ಲಿ ಅಮಾನತಾಗಿರುವ ಅಧಿಕಾರಿಗಳು ಸಚಿವರ ಏಜೆಂಟರೇ? ಅಥವಾ ಮುಖ್ಯಮಂತ್ರಿಗಳ ಏಜೆಂಟರಾಗಿದ್ದರೇ? ಅವರ ತಲೆದಂಡ ಮಾತ್ರ ಯಾಕೆ? ಸಚಿವರ ತಲೆದಂಡ ಯಾಕಾಗಬಾರದು ಎಂದು ಛಲವಾದಿ ನಾರಾಯಣಸ್ವಾಮಿ ಕೇಳಿದರು.

ಸಿಎಂ ವಿರುದ್ಧದ ಮುಡಾ ಹಗರಣದ ತನಿಖೆ ನಡೆಯುತ್ತಿದೆ. ಆದರೂ ಏನೂ ನಡೆದಿಲ್ಲ ಎಂಬಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ಅವರು ರಾಜೀನಾಮೆ ಕೊಟ್ಟಿಲ್ಲ, ಬೇರೆಯವರನ್ನು ಹೇಗೆ ಬಂಧಿಸಲು ನೋಡುತ್ತಿದ್ದಾರೆ. ಸಿಎಂಗೊಂದು ನ್ಯಾಯ, ಇತರರಿಗೆ ಬೇರೆ ನ್ಯಾಯ ಇದೆಯೇ? ಏಕೆ ರಾಜೀನಾಮೆ ಕೊಟ್ಟಿಲ್ಲ? ಕೂಡಲೇ ರಾಜೀನಾಮೆ ಕೊಡಿ ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.

 ದಿನೇಶ್ ಗುಂಡೂರಾವ್ ಅವರನ್ನು ತಕ್ಷಣ ವಜಾ ಮಾಡಬೇಕು :

ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸಿದೆ. ದಿನೇಶ್ ಗುಂಡೂರಾವ್ ಆರೋಗ್ಯ ಸಚಿವರಾಗಲು ಯೋಗ್ಯರಲ್ಲ. ಅವರೇನು ವೈದ್ಯರೇ?, ಎಂಬಿಬಿಎಸ್ ಓದಿದವರೇ?, ಪಿಎಚ್‍ಡಿ ಆಗಿದೆಯೇ? ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

ಯಾದಗಿರಿಯಲ್ಲಿ ವೆಟರ್ನರಿ ಔಷಧಿ ಆಸ್ಪತ್ರೆಗೆ ಸರಬರಾಜಾಗಿದೆ. ಬಾಣಂತಿಯರಿಗೆ ಕೊಟ್ಟ ಔಷಧಿ ಕಳಪೆ ಆಗಿದ್ದುದಲ್ಲದೇ, ಕೊಟ್ಟ ದ್ರಾವಣಗಳು ಕಳಪೆ ಎಂದು ವರದಿ ಬರುತ್ತಿದೆ. ಹೀಗಿದ್ದರೂ ಅವರನ್ನು ಬದಲಿಸಿಲ್ಲ. ಇದು ಜೀವಗಳ ಜೊತೆ ಆಟ. ಸಚಿವ ದಿನೇಶ್ ಗುಂಡೂರಾವ್ ಅವರನ್ನು ತಕ್ಷಣ ವಜಾ ಮಾಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ಒಂದು ವಿಶ್ವವಿದ್ಯಾಲಯದ ಕುಲಾಧಿಪತಿ ಸ್ಥಾನಕ್ಕೆ ಮುಖ್ಯಮಂತ್ರಿಗಳು ರಾಜ್ಯಪಾಲರಿಗೆ ಕೊಕ್ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳೇ, ನೀವು ಸರ್ವಾಧಿಕಾರಿ ಧೋರಣೆ ಮಾಡಲು ಹೊರಟಿದ್ದೀರಾ?. ನಿಮ್ಮ ಮೇಲೆ ಭ್ರಷ್ಟಾಚಾರದ ಹಲವಾರು ಆರೋಪಗಳಿವೆ. ಕುಲಾಧಿಪತಿ ಸ್ಥಾನಕ್ಕೆ ಗವರ್ನರ್ ಯೋಗ್ಯರೆಂದು ಸಾಂವಿಧಾನಿಕ ಹುದ್ದೆಯಾಗಿ ಕೊಡಲಾಗಿತ್ತು. ಈಗ ಅದನ್ನು ವಾಪಸ್ ಪಡೆಯಲು ಹೊರಟಿದ್ದೀರಿ. ಭ್ರಷ್ಟಾಚಾರದಿಂದ ನಿಮ್ಮ ಸರಕಾರ ಕುಲಗೆಟ್ಟಿದ್ದು, ಕುಲಾಧಿಪತಿ ಸ್ಥಾನಕ್ಕೆ ಮುಖ್ಯಮಂತ್ರಿ ಯೋಗ್ಯರೇ ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News