ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ರಾಜೀನಾಮೆ ವಾಪಸ್; ಮುಜುಗರಕ್ಕೀಡಾದ ಬಿಜೆಪಿ ನಾಯಕರು

Update: 2023-10-15 07:17 GMT

ಚಿಕ್ಕಮಗಳೂರು, ಅ.15: ಕಳೆದ ನಾಲ್ಕು ತಿಂಗಳಿನಿಂದ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದಲ್ಲಿ ಬಿಜೆಪಿ ನಗರಸಭೆ ಸದಸ್ಯರು ಹಾಗೂ ಅಧ್ಯಕ್ಷರ ನಡುವೆ ಜಟಾಪಟಿ ನಡೆಯುತ್ತಿದ್ದು, ಪಕ್ಷದ ನಾಯಕರ ಸೂಚನೆ ಮೇರೆಗೆ ಎಡರನೇ ಬಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವರಸಿದ್ದಿ ವೇಣುಗೋಪಾಲ್ ರಾಜೀನಾಮೆ ವಾಪಸ್ ಪಡೆದು ಯಾರ ಕಣ್ಣಿಗೂ ಬೀಳದೆ ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿದೆ. 

ಮಾಜಿ ಸಚಿವ ಸಿ.ಟಿ ರವಿ ಅವರ ಆಪ್ತರಾಗಿರುವ ವರಸಿದ್ದಿ ವೇಣುಗೋಪಾಲ್ ಬಿಜೆಪಿಯ ಬಹುತೇಕ ಸದಸ್ಯರು ರಾಜೀನಾಮೆಗೆ ತೀವ್ರ ಒತ್ತಡ  ಹೇರಿದ್ದರಿಂದ ಇತ್ತೀಚೆಗೆ ಜಿಲ್ಲಾಧಿಕಾರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು.

ಈಗ ಮತ್ತೆ ರಾಜೀನಾಮೆ ವಾಪಸ್ ಪಡೆದಿರುವ ಇವರ ವಿರುದ್ಧ ಶಿಸ್ತುಕ್ರಮಕ್ಕೆ ಬಿಜೆಪಿ ಮುಂದಾಗಿದೆ. ಮತ್ತೊಂದು ಕಡೆ ಕಾಂಗ್ರೆಸ್ ನಾಯಕರು ನಗರಸಭೆಯನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ. 

ಈ ಹಿಂದೆಯೂ ರಾಜೀನಾಮೆ ವಾಪಸ್‌ ಪಡೆದಿದ್ದ ವೇಣುಗೋಪಾಲ್!

ಪಕ್ಷದ ಆಂತರಿಕ ಒಪ್ಪಂದದ ಪ್ರಕಾರ ಒಂದು ವರ್ಷದ ಅವಧಿಯನ್ನು ವೇಣುಗೋಪಾಲ್ ಅವರಿಗೆ ಬಿಟ್ಟು ಕೊಡಲಾಗಿತ್ತು. ಆ ಪ್ರಕಾರ ಕಳೆದ 4 ತಿಂಗಳುಗಳ ಹಿಂದೆ ಅವರು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನೂ ಸಲ್ಲಿಸಿದ್ದರು. ಆದರೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಧ್ಯಕ್ಷರ ಬದಲಾವಣೆ ಬೇಡ ಎನ್ನುವ ಕಾರಣಕ್ಕೆ ಪಕ್ಷ ಅವರ ರಾಜೀನಾಮೆಯನ್ನು ಹಿಂಪಡೆಯಲು ಸೂಚಿಸಿತ್ತು. ಅದರಂತೆ ವೇಣುಗೋಪಾಲ್ ರಾಜೀನಾಮೆಯನ್ನು ಹಿಂಪಡೆದಿದ್ದರು.  



Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News