ಮಂಜುನಾಥ್ ರಾವ್, ಭರತ್ ಭೂಷಣ್ ಅಂತ್ಯಕ್ರಿಯೆ ಪೊಲೀಸ್ ಗೌರವದೊಂದಿಗೆ ನೆರವೇರಿಸಲು ಸಿಎಂ ಸೂಚನೆ

ಭರತ್ ಭೂಷಣ್ | ಮಂಜುನಾಥ್ ರಾವ್
ಶಿವಮೊಗ್ಗ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾಗಿರುವ ಮಂಜುನಾಥ ರಾವ್ ಹಾಗೂ ಭರತ್ ಭೂಷಣ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವದೊಂದಿಗೆ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶಿವಮೊಗ್ಗದ ಮಂಜುನಾಥ ರಾವ್ ಮತ್ತು ಬೆಂಗಳೂರಿನ ಭರತ್ ಭೂಷಣ್ ಅವರ ಪಾರ್ಥಿವ ಶರೀರಗಳನ್ನು ವಿಮಾನದ ಮೂಲಕ ಬೆಂಗಳೂರಿಗೆ ಇಂದು ಬೆಳಿಗ್ಗೆ ತರಲಾಯಿತು.
ಮಂಜುನಾಥ ರಾವ್ ಪಾರ್ಥಿವ ಶರೀರವನ್ನು ತುಮಕೂರು ಮೂಲಕ ಆಂಬುಲೆನ್ಸ್‌ನಲ್ಲಿ ಶಿವಮೊಗ್ಗಕ್ಕೆ ಕಳುಹಿಸಲಾಯಿತು. ಈ ವೇಳೆ ಅವರ ಕುಟುಂಬದವರು ಹಾಜರಿದ್ದರು. ಪಾರ್ಥಿವ ಶರೀರ ಶಿವಮೊಗ್ಗದ ಎಂ.ಆರ್.ಎಸ್.ವೃತ್ತಕ್ಕೆ ತಲುಪುತ್ತಿದ್ದಂತೆಯೇ ದಾರಿಯುದ್ದಕ್ಕೂ ಜನರು ಸೇರಿದ್ದ ಸಾವಿರಾರು ಜನ ಮಂಜುನಾಥ ರಾವ್ ನಿಧನಕ್ಕೆ ಕಂಬನಿ ಮಿಡಿದರು. ನಗರದಾದ್ಯಂತ ಅಂಗಡಿ–ಮುಗ್ಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲಾಗಿತ್ತು.
ಭರತ್ ಭೂಷಣ್ ಅವರ ಪಾರ್ಥಿವ ಶರೀರವನ್ನು ಕುಟುಂಬದವರ ಸಮ್ಮುಖದಲ್ಲಿ ಅಧಿಕಾರಿಗಳು ಭರತ್ ಅವರ ಮತ್ತಿಕೆರೆ ನಿವಾಸಕ್ಕೆ ಆಂಬುಲೆನ್ಸ್‌ನಲ್ಲಿ ತಲುಪಿಸಲಾಯಿತು.