ಕರ್ನಾಟಕಕ್ಕೆ ಬರಪರಿಹಾರ ನೀಡಲು ಅನುಮತಿ : ರೈತರಿಗೆ ನ್ಯಾಯಯುತ ಪರಿಹಾರ ಕೊಡಿಸುವ ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದ ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಸಂಬಂಧ ಒಂದು ವಾರದೊಳಗೆ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದು, ಇದು ನಾಡಿನ ರೈತರಿಗೆ ಸಿಗಬೇಕಿದ್ದ ನ್ಯಾಯಯುತ ಪರಿಹಾರವನ್ನು ಕೊಡಿಸುವ ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಹಂತದ ಜಯ ಎಂದು ಸಿಎಂ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು, "ಬರ ಪರಿಹಾರ ಬಿಡುಗಡೆಗೆ ಚುನಾವಣಾ ಆಯೋಗ ಕೂಡ ಸಮ್ಮತಿಸಿದೆ ಎಂದು ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಬರಪರಿಹಾರಕ್ಕಾಗಿ ಮನವಿ ನೀಡಿ ಐದು ತಿಂಗಳುಗಳು ಕಳೆದರೂ ಕೇಂದ್ರ ಸರ್ಕಾರವು ಯಾವುದೇ ನಿರ್ಣಯ ಕೈಗೊಳ್ಳದೆ, ನ್ಯಾಯಾಲಯದ ಮೆಟ್ಟಿಲೇರುವಂತಹ ಅನಿವಾರ್ಯತೆಯನ್ನು ಸೃಷ್ಟಿಸಿತ್ತು" ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
"ಒಂದು ರಾಜ್ಯ ಸುಪ್ರೀಂ ಕೋರ್ಟ್ ಮೂಲಕ ಬರ ಪರಿಹಾರ ಪಡೆಯುವ ಪರಿಸ್ಥಿತಿ ನಿರ್ಮಾಣಕ್ಕೆ ಕೇಂದ್ರ ಬಿಜೆಪಿ ಸರಕಾರವೇ ಹೊಣೆ. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ನಿಯಮಗಳನ್ನ ರಚಿಸಲಾಗಿದೆ. ಆದರೆ ಕೇಂದ್ರ ತಮಗಿಷ್ಟಬಂದಂತೆ ಬೇಕಾಬಿಟ್ಟಿಯಾಗಿ ನಡೆದುಕೊಂಡಿತು. ಮೂರು ಬಾರಿ ರಾಜ್ಯದ ಬರ ಪರಿಸ್ಥಿತಿ ಕುರಿತು ವರದಿ ನೀಡಿದ್ದೆವು. ಆದರೆ ಕೇಂದ್ರ ಸರಕಾರ ಸ್ಪಂದಿಸಲಿಲ್ಲ. ಅನಿವಾರ್ಯವಾಗಿ ಕರ್ನಾಟಕ ಸರ್ಕಾರದ ಕಾನೂನು ಹೋರಾಟಕ್ಕೆ ಇಳಿಯಬೇಕಾಯಿತು"
ಸಚಿವ ದಿನೇಶ್ ಗುಂಡೂರಾವ್
"ಕನ್ನಡಿಗರ ಹಿತ ಕಾಯುವ ದೃಷ್ಟಿಯಿಂದ ಕೋರ್ಟ್ ಮೆಟ್ಟಿಲೇರುವ ಕರ್ನಾಟಕ ಸರಕಾರದ ದಿಟ್ಟ ನಿರ್ಧಾರದಿಂದ ಕನ್ನಡದ ರೈತರಲ್ಲಿ ಆಶಾಭಾವನೆ ಮೂಡುವಂತಾಗಿದೆ. ಈ ಹೋರಾಟದಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರದ ಜೊತೆ ಕೈಜೋಡಿಸಿ ಬೆಂಬಲವಾಗಿ ನಿಂತ ರಾಜ್ಯದ ರೈತರು ಹಾಗೂ ಪ್ರಜ್ಞಾವಂತ ಜನತೆಗೆ ಧನ್ಯವಾದಗಳನ್ನು ತಿಳಿಸುತ್ತೇವೆ" ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ.
"ಬರ ಪರಿಹಾರದ ವಿಚಾರವಾಗಿ ಸುಪ್ರೀಂ ಕೋರ್ಟಿನಲ್ಲಿ ಕರ್ನಾಟಕಕ್ಕೆ ಮೊದಲ ಹಂತದ ಜಯ ಸಿಕ್ಕಿದೆ. ಒಂದು ವಾರದೊಳಗೆ ಕರ್ನಾಟಕಕ್ಕೆ ಬರ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ಕೇಂದ್ರ ಸರಕಾರ ಒಪ್ಪಿದೆ. ಚುನಾವಣಾ ಭಾಷಣದಲ್ಲಿ ಸುಳ್ಳು ಹೇಳುವ ಕೇಂದ್ರ ಸರಕಾರ ಸುಪ್ರೀಂ ಕೋರ್ಟಿನಲ್ಲಿ ಬಾಲ ಮುದುರಿ ಒಪ್ಪಿಕೊಂಡಿದೆ"
ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಸಂಬಂಧ ಒಂದು ವಾರದೊಳಗೆ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ @BJP4India ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದೆ. ಪರಿಹಾರ ಬಿಡುಗಡೆಗೆ ಚುನಾವಣಾ ಆಯೋಗ ಕೂಡ ಸಮ್ಮತಿಸಿದೆ ಎಂದು ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 1/2#DroughtReliefFund
— Siddaramaiah (@siddaramaiah) April 22, 2024
ಬರಪರಿಹಾರಕ್ಕಾಗಿ ಮನವಿ ನೀಡಿ ಐದು ತಿಂಗಳುಗಳು ಕಳೆದರೂ ಕೇಂದ್ರ @BJP4India ಸರ್ಕಾರವು ಯಾವುದೇ ನಿರ್ಣಯ ಕೈಗೊಳ್ಳದೆ, ನ್ಯಾಯಾಲಯದ ಮೆಟ್ಟಿಲೇರುವಂತಹ ಅನಿವಾರ್ಯತೆಯನ್ನು ಸೃಷ್ಟಿಸಿತ್ತು. ಇದು ನಾಡಿನ ರೈತರಿಗೆ ಸಿಗಬೇಕಿದ್ದ ನ್ಯಾಯಯುತ ಪರಿಹಾರವನ್ನು ಕೊಡಿಸುವ ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಹಂತದ ಜಯ. 2/2#DroughtReliefFund
— Siddaramaiah (@siddaramaiah) April 22, 2024