ಮಲ್ಪೆಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ | ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸುವುದಿಲ್ಲ : ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೀನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ತಳಿಸಿದ ವೀಡಿಯೋ ಕಂಡು ದಿಗ್ಭ್ರಮೆಯಾಯಿತು. ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ಕಾರಣವೇನೇ ಇರಲಿ ಮಹಿಳೆಯನ್ನು ಕೈಕಾಲು ಕಟ್ಟಿ ಹಲ್ಲೆ ಮಾಡುವುದು ಅಮಾನವೀಯ ಮಾತ್ರವಲ್ಲ, ಗಂಭೀರ ಅಪರಾಧವೂ ಹೌದು. ಇಂತಹ ಅನಾಗರೀಕ ವರ್ತನೆ ಕರ್ನಾಟಕದಂತಹ ಸುಸಂಸ್ಕೃತ ನಾಡಿಗೆ ತಕ್ಕುದಾದುದ್ದಲ್ಲ. ಕಳ್ಳತನ, ಮೋಸ, ವಂಚನೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮಕ್ಕೆ ನಮ್ಮಲ್ಲಿ ಪೊಲೀಸ್ ಇಲಾಖೆ, ಕಾನೂನು ವ್ಯವಸ್ಥೆ ಎಲ್ಲವೂ ಇದೆ, ದೂರು ದಾಖಲಿಸಿದರೆ ಪೊಲೀಸರು ತನಿಖೆ ನಡೆಸಿ, ಕಾನೂನಿನಡಿಯಲ್ಲಿ ಶಿಕ್ಷಿಸಲು ಸಮರ್ಥರಿರುವಾಗ ಹೀಗೆ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳುವುದನ್ನು ಸರಕಾರ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.